ADVERTISEMENT

2006ರ ಮುಂಬೈ ಸರಣಿ ಸ್ಫೋಟ: ಎಲ್ಲಾ 12 ಆರೋಪಿಗಳನ್ನು ಖುಲಾಸೆಗೊಳಿಸಿದ ಹೈಕೋರ್ಟ್

ನ್ಯಾಯಮೂರ್ತಿಗಳಾಗಿ ನಮ್ಮ ಕರ್ತವ್ಯ ನಿರ್ವಹಿಸಿದ್ದೇವೆ– ಪೀಠ

ಪಿಟಿಐ
Published 21 ಜುಲೈ 2025, 7:46 IST
Last Updated 21 ಜುಲೈ 2025, 7:46 IST
<div class="paragraphs"><p>ಬಾಂಬ್‌ ಸ್ಫೋಟದಲ್ಲಿ ಬಂಧಿತರಾಗಿದ್ದ ಆರೋಪಿಗಳು–ಪಿಟಿಐ ಚಿತ್ರ</p></div>

ಬಾಂಬ್‌ ಸ್ಫೋಟದಲ್ಲಿ ಬಂಧಿತರಾಗಿದ್ದ ಆರೋಪಿಗಳು–ಪಿಟಿಐ ಚಿತ್ರ

   

ಮುಂಬೈ: ಮುಂಬೈನ ಲೋಕಲ್‌ ರೈಲುಗಳಲ್ಲಿ 2006ರ ಜುಲೈ 11ರಂದು ನಡೆದ ಸರಣಿ ಬಾಂಬ್‌ ಸ್ಫೋಟಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್‌ನ ಅನಿಲ್‌ ಕಿಲೊರ್‌ ಹಾಗೂ ಶ್ಯಾಮ್‌ ಚಾಂದಕ್‌ ನೇತೃತ್ವದ ನ್ಯಾಯಪೀಠವು, ಎಲ್ಲಾ 12 ಮಂದಿ ಆರೋಪಿಗಳನ್ನು ದೋಷಮುಕ್ತಗೊಳಿಸಿ ಸೋಮವಾರ ತೀರ್ಪು ನೀಡಿದೆ. 

‘ಆರೋಪಿಗಳೆಲ್ಲರೂ, ಅಪರಾಧ ಎಸಗಿದ್ದಾರೆ ಎಂದು ನಂಬಲು ಕಷ್ಟವಾಗಿತ್ತು, ಪ್ರಕರಣವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ ಸಂಪೂರ್ಣವಾಗಿ ವಿಫಲವಾಗಿದೆ’ ಎಂದು ತಿಳಿಸಿದ ನ್ಯಾಯಪೀಠ, 2015ರಲ್ಲಿ ವಿಶೇಷ ನ್ಯಾಯಾಲಯವು 12 ಮಂದಿಗೆ ವಿಧಿಸಿದ್ದ ಶಿಕ್ಷೆಯನ್ನು ರದ್ದುಗೊಳಿಸಿದೆ.

ADVERTISEMENT

‘ಅಪರಾಧ ಕೃತ್ಯಕ್ಕೆ ಬಳಸಿದ್ದ ಬಾಂಬ್‌ನ ಮಾದರಿಗಳನ್ನು ಮುಂದಿಡಲು ಪ್ರಾಸಿಕ್ಯೂಷನ್‌ ಸಂಪೂರ್ಣವಾಗಿ ವಿಫಲವಾಗಿದೆ. ಈಗ ಪ್ರಸ್ತುತಪಡಿಸಿರುವ ಸಾಕ್ಷ್ಯಗಳು ಆರೋಪಿಗಳನ್ನು ಶಿಕ್ಷಿಸಲು ನಿರ್ಣಾಯಕವಾಗಿಲ್ಲ. ಸಾಕ್ಷಿ ಹೇಳಿಕೆಗಳು ಹಾಗೂ ಆರೋಪಿಗಳಿಂದ ವಶಕ್ಕೆ ಪಡೆಯಲಾದ ವಸ್ತುಗಳಿಗೂ ಸಾಕ್ಷ್ಯ ಮೌಲ್ಯವಿಲ್ಲ’ ಎಂದು ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ತಿಳಿಸಿದೆ.

‘ನ್ಯಾಯಮೂರ್ತಿಗಳಾಗಿ ನಮ್ಮ ಕರ್ತವ್ಯ ನಿರ್ವಹಿಸಿದ್ದೇವೆ. ಅದು ನಮ್ಮ ಮೇಲಿರುವ ಜವಾಬ್ದಾರಿಯಾಗಿದೆ’ ಎಂದು ನ್ಯಾಯಪೀಠವು ಹೇಳಿದೆ.

‘ಈ ಪ್ರಕರಣದಲ್ಲಿ ಆರೋಪಿಗಳು ನೀಡಿದ ತಪ್ಪೊಪ್ಪಿಗೆ ಹೇಳಿಕೆಯು ಪರಿಪೂರ್ಣವಾಗಿಲ್ಲ. ಕೆಲವು ಭಾಗಗಳಲ್ಲಿ ಒಬ್ಬರ ತಪ್ಪೊಪ್ಪಿಗೆ ಹೇಳಿಕೆಯನ್ನೇ ಮತ್ತೊಬ್ಬರಿಗೂ ನಕಲು ಮಾಡಲಾಗಿದೆ. ತಪ್ಪೊಪ್ಪಿಗೆ ಹೇಳಿಕೆ ಪಡೆಯುವಾಗ ಚಿತ್ರಹಿಂಸೆ ನೀಡಲಾಗಿತ್ತು ಎಂದು ಆರೋಪಿಗಳು ಸಾಬೀತುಪಡಿಸಿದ್ದಾರೆ’ ಎಂದು ಹೇಳಿದೆ.

ಸಾಕ್ಷಿಗಳು ನೀಡಿದ ಸಾಕ್ಷ್ಯವನ್ನು ಮಾನ್ಯಮಾಡಲು ಹೈಕೋರ್ಟ್‌ ನಿರಾಕರಿಸಿದೆ. ‌‘ಸಾಕ್ಷಿದಾರರು ನೀಡಿದ ಹೇಳಿಕೆ ನಂಬಲು ಅರ್ಹವಾಗಿಲ್ಲ. ಆರೋಪಿಗಳನ್ನು ಶಿಕ್ಷಿಸಲು ನಿರ್ಣಾಯಕವಾಗಿಲ್ಲ’ ಎಂದು ತಿಳಿಸಿದೆ.

‘ಆರೋಪಿಗಳ ವಿರುದ್ಧ ಯಾವುದೇ ಪ್ರಕರಣಗಳು ಇಲ್ಲದಿದ್ದರೆ, ಎಲ್ಲರನ್ನೂ ಜೈಲಿನಿಂದ ಬಿಡುಗಡೆಗೊಳಿಸಬಹುದು’ ಎಂದು ಹೈಕೋರ್ಟ್‌ ತಿಳಿಸಿದೆ.

ನ್ಯಾಯಾಲಯವು ತೀರ್ಪು ಪ್ರಕಟಿಸುತ್ತಿದ್ದಂತೆಯೇ, ಆರೋಪಿಗಳ ಪರ ವಾದ ಮಂಡಿಸಿದ್ದ ಯುಗ್‌ ಚೌಧರಿ, ‘ನ್ಯಾಯಾಲಯದ ತೀರ್ಪಿನಿಂದ ನ್ಯಾಯ ಹಾಗೂ ಮಾನವೀಯತೆ ಮೇಲಿನ ನಂಬಿಕೆ ಪುನರ್‌ಸ್ಥಾಪನೆಯಾಗಿದೆ. ತಾವು ಅಪರಾಧ ಮಾಡದಿದ್ದರೂ, 12 ಮಂದಿ 19 ವರ್ಷ ಜೈಲಿನಲ್ಲಿ ಕೊಳೆಯುವಂತಾಯಿತು’ ಎಂದು ಹೇಳಿದ್ದಾರೆ.

ಕೆಲ ಆರೋಪಿಗಳ ಪರ ಹಾಜರಾಗಿದ್ದ ಹಿರಿಯ ವಕೀಲ ಎಸ್‌.ಮುರಳೀಧರ್‌, ‘ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣಗಳ ತನಿಖೆ ಮಾಡುವಾಗ ತನಿಖಾ ತಂಡವು ‘ಕೋಮು ಪಕ್ಷಪಾತ’ವಾಗಿ ತನಿಖೆ ನಡೆಸಿತು’ ಎಂದು ಆರೋಪಿಸಿದರು.

12 ಮಂದಿ ಆರೋಪಿಗಳ ಪೈಕಿ 5 ಮಂದಿಗೆ ಗಲ್ಲುಶಿಕ್ಷೆ, ಉಳಿದ ಏಳು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಕಮಲ್‌ ಅಹಮದ್‌ ಅನ್ಸಾರಿ 2021ರಲ್ಲಿ ಮೃತಪಟ್ಟಿದ್ದಾರೆ.

2006ರ ಜುಲೈ 11ರಂದು ಮುಂಬೈ ಲೋಕಲ್‌ ರೈಲುಗಳಲ್ಲಿ ವಿವಿಧೆಡೆ ನಡೆದ ಏಳು ಬಾಂಬ್‌ ಸ್ಫೋಟಗಳಲ್ಲಿ ಸ್ಥಳದಲ್ಲೇ 180 ಮಂದಿ ಮೃತಪಟ್ಟು, ನೂರಾರು ಮಂದಿ ಗಾಯಗೊಂಡಿದ್ದರು. ಚಿಕಿತ್ಸೆಗೆ ಸ್ಪಂದಿಸದೇ, 29 ಮಂದಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

11 ಪೀಠಗಳ ಎದುರು ಪ್ರಕರಣ ಮಂಡನೆಯಾದರೂ, 2015ರಿಂದಲೂ ಈ ಸಂಬಂಧ ಸಲ್ಲಿಸಿದ್ದ ಮೇಲ್ಮನವಿಯ ಅರ್ಜಿ ವಿಚಾರಣೆ ನಡೆದಿರಲಿಲ್ಲ. ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಈತೇಶ್ಯಾಮ್‌ ಸಿದ್ದಿಕಿಯು ತ್ವರಿತ ವಿಚಾರಣೆ ನಡೆಸಲು ಹೈಕೋರ್ಟ್‌ ಮಧ್ಯಪ್ರವೇಶಿಸಬೇಕು ಎಂದು ಕೋರಿ ಮನವಿ ಸಲ್ಲಿಸಿದ್ದರು.

ಇದಾದ ನಂತರ ಮೇಲ್ಮನವಿ ಅರ್ಜಿಗಳ ವಿಚಾರಣೆಗೆ ನ್ಯಾಯಮೂರ್ತಿಗಳಾದ ಕಿಲೊರ್‌ ಹಾಗೂ ಚಾಂದಕ್‌ ಅವರ ನೇತೃತ್ವದಲ್ಲಿ ವಿಶೇಷ ನ್ಯಾಯಪೀಠ ರಚಿಸಲಾಗಿತ್ತು. ಜ.31ರಿಂದ ಐದು ತಿಂಗಳ ಕಾಲ ಈ ಪೀಠವು ದೈನಂದಿನ ಆಧಾರದಲ್ಲಿ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿತ್ತು.

ಹೈಕೋರ್ಟ್‌ ತೀರ್ಪು ಪರಿಶೀಲನೆ: ಬಾವಂಕುಲೆ

ಮುಂಬೈ: ‘ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಮೊದಲು ಬಾಂಬೆ ಹೈಕೋರ್ಟ್‌ ನೀಡಿದ ತೀರ್ಪಿನ ಕುರಿತು ರಾಜ್ಯ ಸರ್ಕಾರ ಸಮಗ್ರವಾಗಿ ಪರಿಶೀಲಿಸಲಿದೆ’ ಎಂದು ಮಹಾರಾಷ್ಟ್ರ ಕಂದಾಯ ಸಚಿವ ಹಾಗೂ ಬಿಜೆಪಿ ನಾಯಕ ಚಂದ್ರಶೇಖರ್‌ ಬಾವಂಕುಲೆ ತಿಳಿಸಿದ್ದಾರೆ. ಈ ಕುರಿತು ಪತ್ರಕರ್ತರ ಜೊತೆ ಮಾತನಾಡಿದ ಅವರು ‘ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ ಅಂಶಗಳ ಕುರಿತು ಗಮನಹರಿಸಲಾಗುತ್ತದೆ. ಮುಖ್ಯಮಂತ್ರಿ  ದೇವೇಂದ್ರ ಫಡಣವೀಸ್‌ ಕೂಡ ಪರಿಶೀಲಿಸಲಿದ್ದಾರೆ. ಬಳಿಕ ರಾಜ್ಯ ಸರ್ಕಾರವು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಿದೆ’ ಎಂದು ಹೇಳಿದ್ದಾರೆ.

ಖುಲಾಸೆಯಾಗುವ ವಿಶ್ವಾಸವಿತ್ತು: ಅನ್ಸಾರಿ

‘ಭಯೋತ್ಪಾದನ ನಿಗ್ರಹ ಪಡೆ(ಎಟಿಎಸ್‌)ಯು ಉದ್ದೇಶಪೂರ್ವಕವಾಗಿ ಈ ಪ್ರಕರಣದಲ್ಲಿ ಬಂಧಿಸಿತ್ತು ನಾವೆಲ್ಲರೂ ದೋಷಮುಕ್ತಿಯಾಗಿ ಹೊರಬರುವ ವಿಶ್ವಾಸ ಹೊಂದಿದ್ದೆವು’ ಆರೋಪಿ ಮೊಹಮ್ಮದ್‌ ಸಾಜೀದ್‌ ಅನ್ಸಾರಿ ತಿಳಿಸಿದ್ದಾರೆ. ಅನ್ಸಾರಿ ಸದ್ಯ ಪೆರೋಲ್‌ ಮೇಲಿದ್ದಾರೆ. ‘ನಾನು ಸೇರಿದಂತೆ ಎಲ್ಲ ಆರೋಪಿಗಳು 19 ವರ್ಷದಿಂದ ನೋವು ಅನುಭವಿಸಿದ್ದು ನಿರಪರಾಧಿಗಳು ಎಂದು ಸಾಬೀತುಪಡಿಸಲು ಹೋರಾಟ ನಡೆಸಿದೆವು’ ಎಂದು ತಿಳಿಸಿದರು. ಬಾಂಬ್‌ ತಯಾರಿಕೆಗೆ ಬೇಕಾದ ವಸ್ತುಗಳ ಪೂರೈಕೆ ಹಾಗೂ ಸಾಗಣೆ ಮಾಡಿದ ಆರೋಪದ ಮೇಲೆ ಅನ್ಸಾರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

ಯಾರೂ ಜನರನ್ನು ಕೊಂದಿಲ್ಲ: ಸಂತ್ರಸ್ತರ ಆಕ್ರೋಶ

ಮುಂಬೈ: ‘ಈ ದೇಶದ ಕಾನೂನು ನ್ಯಾಯನೀಡಲು ವಿಫಲವಾಗಿದ್ದು ನ್ಯಾಯ ಕೊಲ್ಲಲ್ಪಟ್ಟಿದೆ’ ಎಂದು ಸ್ಫೋಟದಲ್ಲಿ ಬದುಕುಳಿದ ಸಂತ್ರಸ್ತ ಚಿರಾಗ್‌ ಚೌಹಾಣ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಘಟನೆ ನಡೆದ ವೇಳೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಿದ್ದರೆ ಪರಿಸ್ಥಿತಿ ಬೇರೆಯಾಗಿರುತ್ತಿತ್ತು’ ಎಂದು ಹೇಳಿದ್ದಾರೆ. ‘ಸ್ಫೋಟದಲ್ಲಿ ಬದುಕಿ ಉಳಿದವರಲ್ಲಿ ನಾನೂ ಒಬ್ಬ. ವೈಯಕ್ತಿಕವಾಗಿ ಈ ಹಿಂದೆಯೇ ಭಯೋತ್ಪಾದಕರನ್ನು ಕ್ಷಮಿಸಿದ್ದೇನೆ. ಜೀವನ ಸಾಗಿಸುತ್ತಿದ್ದೇನೆ. ಆದರೆ ಈ ನೆಲದ ಕಾನೂನು ಇಂದು ತಪ್ಪಿತಸ್ಥರನ್ನು ಶಿಕ್ಷಿಸುವಲ್ಲಿ ಪ್ರಾಣ ಕಳೆದುಕೊಂಡಿದ್ದ 180ಕ್ಕೂ ಮಂದಿಗೆ ನ್ಯಾಯ ಒದಗಿಸುವಲ್ಲಿ ವಿಫಲವಾಗಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.