ADVERTISEMENT

ರಾಜಸ್ಥಾನಿ, ಗುಜರಾತಿಗಳಿಲ್ಲವಾದರೆ ಮುಂಬೈನಲ್ಲಿ ಹಣವೇ ಇರದು: ರಾಜ್ಯಪಾಲ ಕೋಶಿಯಾರಿ

ಪಿಟಿಐ
Published 30 ಜುಲೈ 2022, 9:57 IST
Last Updated 30 ಜುಲೈ 2022, 9:57 IST
ಭಗತ್‌ ಸಿಂಗ್‌ ಕೋಶಿಯಾರಿ
ಭಗತ್‌ ಸಿಂಗ್‌ ಕೋಶಿಯಾರಿ    

ಮುಂಬೈ: ಗುಜರಾತಿಗಳು ಮತ್ತು ರಾಜಸ್ಥಾನಿಗಳು ಇರದೇ ಹೋದರೆ ಮುಂಬೈನಲ್ಲಿ ಹಣವೇ ಇರುವುದಿಲ್ಲ. ದೇಶದ ಆರ್ಥಿಕ ರಾಜಧಾನಿಯಾಗಿಯೂ ಉಳಿಯುವುದಿಲ್ಲ ಎನ್ನುವ ಮೂಲಕ ಮಹಾರಾಷ್ಟ್ರ ರಾಜ್ಯಪಾಲ ಭಗತ್‌ಸಿಂಗ್‌ ಕೋಶಿಯಾರಿ ಶನಿವಾರ ವಿವಾದ ಸೃಷ್ಟಿ ಮಾಡಿದ್ದಾರೆ.

ರಾಜ್ಯಪಾಲರ ಈ ಹೇಳಿಕೆಯನ್ನು ಕಾಂಗ್ರೆಸ್ ತೀವ್ರವಾಗಿ ಟೀಕಿಸಿದ್ದು, ರಾಜ್ಯಪಾಲ ಕೋಶಿಯಾರಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದೆ.

ಮುಂಬೈನ ಪಶ್ಚಿಮ ಉಪನಗರ ಅಂಧೇರಿಯಲ್ಲಿ ವೃತ್ತವೊಂದಕ್ಕೆ ನಾಮಕರಣ ಮಾಡುವ ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ರಾಜ್ಯಪಾಲ ಕೋಶಿಯಾರಿ, ‘ನಾನು ಇಲ್ಲಿನ ಜನರಿಗೆ ಹೇಳಬಯಸುತ್ತೇನೆ. ಗುಜರಾತಿಗಳು ಮತ್ತು ರಾಜಸ್ಥಾನಿಗಳನ್ನು ಮಹಾರಾಷ್ಟ್ರದಿಂದ, ವಿಶೇಷವಾಗಿ ಮುಂಬೈ ಮತ್ತು ಥಾಣೆಯಿಂದ ಹೊರಹಾಕಿದರೆ ನಿಮ್ಮ ಬಳಿ ಹಣವಿರುವುದಿಲ್ಲ. ಮುಂಬೈ ಆರ್ಥಿಕ ರಾಜಧಾನಿಯಾಗಿ ಉಳಿಯುವುದಿಲ್ಲ’ ಎಂದು ಹೇಳಿದ್ದಾರೆ.

ADVERTISEMENT

ಮುಂಬೈಯನ್ನು ದೇಶದ ಆರ್ಥಿಕ ರಾಜಧಾನಿಯನ್ನಾಗಿ ಮಾಡುವಲ್ಲಿ ರಾಜಸ್ಥಾನಿ-ಮಾರ್ವಾಡಿ ಮತ್ತು ಗುಜರಾತಿ ಸಮುದಾಯಗಳ ಕೊಡುಗೆಯನ್ನು ಕೋಶಿಯಾರಿ ಶ್ಲಾಘಿಸಿದ್ದಾರೆ ಎಂದು ರಾಜಭವನ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿಯೂ ಹೇಳಲಾಗಿದೆ.

ರಾಜಸ್ಥಾನಿ-ಮಾರ್ವಾಡಿ ಸಮುದಾಯವು ದೇಶದ ವಿವಿಧ ಭಾಗಗಳಲ್ಲಿ ವಾಸಿಸುತ್ತಿದೆ. ನೇಪಾಳ ಮತ್ತು ಮಾರಿಷಸ್‌ನಂತಹ ದೇಶಗಳಲ್ಲೂ ನೆಲೆಸಿದೆ ಎಂದೂ ರಾಜ್ಯಪಾಲರು ಹೇಳಿದರು.

ಈ ಸಮುದಾಯದವರು ಎಲ್ಲಿಗೇ ಹೋದರೂ ವ್ಯಾಪಾರ ಮಾಡುವುದಲ್ಲದೇ ಶಾಲೆ, ಆಸ್ಪತ್ರೆಗಳನ್ನು ಕಟ್ಟುವ ಮೂಲಕ ಪರೋಪಕಾರದ ಕಾರ್ಯಗಳನ್ನು ಮಾಡುತ್ತಾರೆ ಎಂದು ಕೋಶಿಯಾರಿ ತಿಳಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ವಕ್ತಾರ ಅತುಲ್ ಲೋಂಧೆ ಅವರು ರಾಜ್ಯಪಾಲರ ಹೇಳಿಕೆಗಳ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದ ಮೇಲಿನ ದ್ವೇಷವನ್ನು ಅವರು ಹೊರ ಹಾಕಿದ್ದಾರೆ. ಅಲ್ಲದೆ ರಾಜ್ಯಪಾಲರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.