ADVERTISEMENT

ಅತಿ ದೊಡ್ಡ ದೇವಾಲಯ ನಿರ್ಮಾಣ: ಮುಸ್ಲಿಂ ಕುಟುಂಬದಿಂದ ₹2.5 ಕೋಟಿ ಮೌಲ್ಯದ ಭೂಮಿ ದಾನ

ಪಿಟಿಐ
Published 22 ಮಾರ್ಚ್ 2022, 11:39 IST
Last Updated 22 ಮಾರ್ಚ್ 2022, 11:39 IST
ಸಾಂದರ್ಭಿಕ ಚಿತ್ರ (ಕೃಪೆ – ಐಸ್ಟಾಕ್)
ಸಾಂದರ್ಭಿಕ ಚಿತ್ರ (ಕೃಪೆ – ಐಸ್ಟಾಕ್)   

ಪಟ್ನಾ: ವಿಶ್ವದ ಅತಿ ದೊಡ್ಡ ಹಿಂದೂ ದೇಗುಲ ನಿರ್ಮಾಣಕ್ಕಾಗಿ ಬಿಹಾರದ ಮುಸ್ಲಿಂ ಕುಟುಂಬವೊಂದು ₹2.5 ಕೋಟಿ ಮೌಲ್ಯದ ಭೂಮಿ ಕೊಡುಗೆ ನೀಡಿದೆ.

ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಕೈಥ್‌ವಲಿಯಾದಲ್ಲಿ ವಿಶ್ವದ ಅತಿ ದೊಡ್ಡ ಹಿಂದೂ ದೇಗುಲ ‘ವಿರಾಟ್ ರಾಮಾಯಣ ಮಂದಿರ’ ನಿರ್ಮಾಣವಾಗಲಿದೆ. ಪಟ್ನಾ ಮೂಲದ ‘ಮಹಾವೀರ್ ಮಂದಿರ್ ಟ್ರಸ್ಟ್’ ದೇಗುಲ ನಿರ್ಮಾಣ ಯೋಜನೆ ಕೈಗೆತ್ತಿಕೊಂಡಿದೆ. ಈ ದೇಗುಲಕ್ಕೆ ಪೂರ್ವ ಚಂಪಾರಣ್ ಜಿಲ್ಲೆಯ ಉದ್ಯಮಿ ಇಶ್ತಿಯಾಕ್ ಅಹಮದ್ ಖಾನ್ ಭೂಮಿ ನೀಡಿದ್ದಾರೆ ಎಂದು ಟ್ರಸ್ಟ್‌ನ ಮುಖ್ಯಸ್ಥ, ಐಪಿಎಸ್ ಮಾಜಿ ಅಧಿಕಾರಿ ಆಚಾರ್ಯ ಕಿಶೋರ್ ಕುನಾಲ್ ತಿಳಿಸಿದ್ದಾರೆ.

‘ತಮ್ಮ ಕುಟುಂಬಕ್ಕೆ ಸೇರಿದ ಭೂಮಿಯನ್ನು ದೇಗುಲ ನಿರ್ಮಾಣಕ್ಕೆ ನೀಡುವ ವಿಚಾರವಾಗಿ ಇಶ್ತಿಯಾಕ್ ಅಹಮದ್ ಖಾನ್ ಅವರು ಇತ್ತೀಚೆಗೆ ಪೂರ್ವ ಚಂಪಾರಣ್‌ನ ಕೇಶಾರಿಯಾ ಉಪ ವಿಭಾಗದ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದಾರೆ’ ಎಂದು ಕುನಾಲ್ ಹೇಳಿದ್ದಾರೆ.

ADVERTISEMENT

‘ಖಾನ್ ಕುಟುಂಬದ ಈ ಕೊಡುಗೆಯು ಸಾಮಾಜಿಕ ಸಾಮರಸ್ಯ, ಎರಡೂ ಸಮುದಾಯಗಳ ನಡುವಣ ಭ್ರಾತೃತ್ವಕ್ಕೆ ಅತ್ಯುತ್ತಮ ಉದಾಹರಣೆ. ಮುಸ್ಲಿಮರ ಸಹಾಯವಿಲ್ಲದೆ ಕನಸಿನ ಯೋಜನೆಯನ್ನು ಸಾಕಾರಗೊಳಿಸುವುದು ಸಾಧ್ಯವಾಗುತ್ತಿರಲಿಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ದೇಗುಲ ನಿರ್ಮಾಣಕ್ಕಾಗಿ ಟ್ರಸ್ಟ್ ಈವರೆಗೆ 125 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ಶೀಘ್ರದಲ್ಲೇ ಇನ್ನೂ 25 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.

ಹೇಗಿರಲಿದೆ ದೇಗುಲ?

‘ವಿರಾಟ್ ರಾಮಾಯಾಣ ಮಂದಿರ’ವು ಕಾಂಬೋಡಿಯಾದಲ್ಲಿರುವ 12ನೇ ಶತಮಾನದ 215 ಅಡಿ ಎತ್ತರದ ‘ಆಂಗ್‌ಕೋರ್ ವಾಟ್ ಕಾಂಪ್ಲೆಕ್ಸ್‌’ಗಿಂತಲೂ ಎತ್ತರ ಇರಲಿದೆ. ‘ವಿರಾಟ್ ರಾಮಾಯಾಣ ಮಂದಿರ’ ವ್ಯಾಪ್ತಿಯಲ್ಲಿ ಒಟ್ಟು 18 ದೇಗುಲಗಳು ಇರಲಿವೆ. ವಿಶ್ವದ ಅತಿದೊಡ್ಡ ಶಿವಲಿಂಗ ಹೊಂದಿರುವ ದೇಗುಲವೂ ಇರಲಿದೆ. ಒಟ್ಟು ನಿರ್ಮಾಣ ವೆಚ್ಚ ₹500 ಕೋಟಿ ಅಂದಾಜಿಸಲಾಗಿದೆ ಎಂದು ಕುನಾಲ್ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.