ADVERTISEMENT

ವೃದ್ಧೆಯ ಅಂತ್ಯಸಂಸ್ಕಾರಕ್ಕೆ ತಯಾರಿ ನಡೆಸಿದ್ದವರಿಗೇ ಅಚ್ಚರಿ: ಅಂಥದ್ದೇನಾಯ್ತು?

ಪಿಟಿಐ
Published 15 ಜನವರಿ 2026, 8:37 IST
Last Updated 15 ಜನವರಿ 2026, 8:37 IST
<div class="paragraphs"><p>ಗಂಗಾಬಾಯಿ</p></div>

ಗಂಗಾಬಾಯಿ

   

ಚಿತ್ರ ಕೃಪೆ: ಎಕ್ಸ್‌

ನಾಗ್ಪುರ: 103 ವರ್ಷದ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಭಾವಿಸಿ ಕುಟುಂಬ ಸದಸ್ಯರು ಅಂತ್ಯ ಸಂಸ್ಕಾರಕ್ಕೆ ತಯಾರಿ ನಡೆಸಿದ್ದ ವೇಳೆ ಅವರು ಬದುಕಿರುವುದು ಗೊತ್ತಾದ ಘಟನೆ ನಾಗ್ಪುರ ಜಿಲ್ಲೆಯ ರಾಮ್ಟೆಕ್ ನಗರದಲ್ಲಿ ನಡೆದಿದೆ.

ADVERTISEMENT

ಇಲ್ಲಿನ 103 ವರ್ಷದ ಗಂಗಾಬಾಯಿ ಸಾವ್ಜಿ ಸಖಾರೆ ಎಂಬುವವರು ಕಳೆದ ಎರಡು ತಿಂಗಳಿನಿಂದ ತೀವ್ರ ಆನಾರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿದಿದ್ದರು. ಜನವರಿ 12ರ ಸಂಜೆ 5 ಗಂಟೆ ಸುಮಾರಿಗೆ ಗಂಗಾಬಾಯಿ ಅವರ ದೇಹದಲ್ಲಿ ಯಾವುದೇ ಚಲನವಲನ ಇರಲಿಲ್ಲ. ಇದರಿಂದಾಗಿ ಅವರು ತೀರಿ ಹೋಗಿದ್ದಾರೆ ಎಂದು ಭಾವಿಸಿದ ಕುಟುಂಬಸ್ಥರು ತಡ ಮಾಡದೆ, ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸಲು ಪ್ರಾರಂಭಿಸಿದ್ದರು. ಸಂಬಂಧಿಗಳಿಗೂ ಕರೆ ಮಾಡಿದ್ದರು. ಆದರೆ ಅವರು ನಿಜವಾಗಿಯೂ ಮೃತಪಟ್ಟಿದ್ದಾರೆಯೆ ಎನ್ನುವ ಬಗ್ಗೆ ವೈದ್ಯರಿಂದ ತಪಾಸಣೆ ನಡೆಸಿ ದೃಢಪಡಿಸಿಕೊಂಡಿರಲಿಲ್ಲ.

’ಗಂಗಾಬಾಯಿ ಅವರ ದೇಹದಲ್ಲಿ ಯಾವುದೇ ರೀತಿಯ ಚಲನವಲನ ಇರಲಿಲ್ಲ. ಹೀಗಾಗಿ ಅವರು ಮೃತಪಟ್ಟಿದ್ದಾರೆ ಎಂದು ನಾವು ಭಾವಿಸಿದ್ದೆವು. ಆ ಕಾರಣಕ್ಕಾಗಿ ಸಂಬಂಧಿಕರಿಗೆ ಮಾಹಿತಿ ನೀಡಿ, ಪದ್ಧತಿಯಂತೆ ಹೊಸ ಬಟ್ಟೆ ತೊಡಿಸಿ, ಕಾಲುಗಳನ್ನು ಕಟ್ಟಿದ್ದೆವು’ ಎಂದು ಅವರ ಮೊಮ್ಮಗ ರಾಕೇಶ್ ಸಖಾರೆ ಹೇಳಿದ್ದಾರೆ.

ಅಂತ್ಯಸಂಸ್ಕಾರ ನಡೆಸಲು ಬೇಕಾದ ವಸ್ತುಗಳು ಹಾಗೂ ಶವ ಸಾಗಿಸುವ ವಾಹನವನ್ನು ಸಹ ಬುಕ್ ಮಾಡಲಾಗಿತ್ತು. ಆದರೆ ಇದಕ್ಕಿದ್ದ ಹಾಗೆ ಗಂಗಾಬಾಯಿ ಅವರ ಕಾಲು ಬೆರಳುಗಳು ಅಲುಗಾಡುತ್ತಿರುವುದನ್ನು ಮೊಮ್ಮಗ ಗಮನಿಸಿ, ತಕ್ಷಣ ಮೂಗಿಗೆ ಹಾಕಿದ್ದ ಹತ್ತಿಯನ್ನು ತೆಗೆದಿದ್ದಾರೆ. ಆಗ ವೃದ್ಧೆ ಉಸಿರಾಡಿದ್ದಾರೆ ಎಂದು ತಿಳಿದುಬಂದಿದೆ.

‘ಗಂಗೂಬಾಯಿ ಅವರು ಬದುಕಿರುವುದನ್ನು ಕಂಡು ಸಂತಸವಾಯಿತು. ಶವ ಸಾಗಿಸಲು ಬುಕ್‌ ಮಾಡಿದ್ದ ವಾಹನವನ್ನು ರದ್ದುಗೊಳಿಸಿದೆವು. ಜನವರಿ 13 ಗಂಗಾಬಾಯಿಯವರ 103ನೇ ಜನ್ಮದಿನವಿತ್ತು. ಹೀಗಾಗಿ ಜನ್ಮದಿನವನ್ನೂ ಆಚರಿಸಿದೆವು’ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.