ADVERTISEMENT

ವಿಜಯ್ ಜತೆ ನಟಿ ತ್ರಿಷಾ ಹೆಸರು ಬಳಕೆ ವಿವಾದ: ಬಿಜೆಪಿ ನಾಯಕ ನೈನಾರ್ ಕ್ಷಮೆಯಾಚನೆ

ಏಜೆನ್ಸೀಸ್
Published 16 ಫೆಬ್ರುವರಿ 2026, 16:02 IST
Last Updated 16 ಫೆಬ್ರುವರಿ 2026, 16:02 IST
   

ಚೆನ್ನೈ: 'ತಮಿಳಿಗ ವೆಟ್ರಿ ಕಳಗಂ' ಪಕ್ಷದ ಸ್ಥಾಪಕ, ನಟ ವಿಜಯ್ ಅವರನ್ನು ಟೀಕಿಸುವ ಭರದಲ್ಲಿ ನಟಿ ತ್ರಿಷಾ ಅವರ ಹೆಸರನ್ನು ಬಳಸಿದ್ದು ವಿವಾದಕ್ಕೆ ಕಾರಣವಾಗುತ್ತಿದ್ದಂತೆ ತಮಿಳುನಾಡು ಬಿಜೆಪಿ ನಾಯಕ ನೈನಾರ್ ನಾಗೇಂದ್ರನ್‌ ಕ್ಷಮೆ ಯಾಚಿಸಿದ್ದಾರೆ.

'ಆಕಸ್ಮಿಕವಾಗಿ ಆ ಮಾತುಗಳು ಹೊರಬಂದಿವೆ, ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ, ಕ್ಷಮೆ ಯಾಚಿಸುತ್ತೇನೆ' ಎಂದು ಹೇಳಿದ್ದಾರೆ.

'ಶಾಸಕಿ ವನತಿ ಶ್ರೀನಿವಾಸನ್ ಮತ್ತು ಕೆ. ಅಣ್ಣಾಮಲೈ ಅವರು ಈ ವಿವಾದದ ಬಗ್ಗೆ ನನ್ನೊಂದಿಗೆ ಚರ್ಚಿಸಿದ್ದಾರೆ. ಈ ಬಗ್ಗೆ ನನಗೆ ಅರ್ಥ ಮಾಡಿಸಿದ್ದಾರೆ. ನನ್ನ ಮಾತುಗಳಿಗೆ ವಿಷಾದಿಸುತ್ತೇನೆ ಮತ್ತು ಕ್ಷಮೆಯಾಚಿಸುತ್ತೇನೆ' ಎಂದಿದ್ದಾರೆ.

ADVERTISEMENT

ವಿಜಯ್‌ ಅವರನ್ನು ಟೀಕಿಸುವ ವೇಳೆ ನೈನಾರ್, 'ತಮಿಳಿಗ ವೆಟ್ರಿ ಕಳಗಂ’ ಪಕ್ಷದ ಸ್ಥಾಪಕ, ನಟ ವಿಜಯ್ ಅವರಿಗೆ ರಾಜಕೀಯದ ಅನುಭವ ಕಡಿಮೆ ಇದೆ. ಅವರು ತಮ್ಮ ಕುಟುಂಬದ ಬಗ್ಗೆ ಗಮನ ನೀಡಬೇಕು. ಜತೆಗೆ, ತ್ರಿಷಾ ಅವರ ಗುಂಗಿನಿಂದ ಹೊರಬರಬೇಕು. ಆಗ ಮಾತ್ರ ಏನಾದರೂ ಮಾಡಲು ಸಾಧ್ಯ' ಎಂದಿದ್ದರು.

ತ್ರಿಷಾ ಕಿಡಿ

ಈ ಹೇಳಿಕೆ ವಿರುದ್ಧ ಕಿಡಿಕಾರಿದ್ದ ನಟಿ ತ್ರಿಷಾ, ವಕೀಲರ ಮೂಲಕ ಹೇಳಿಕೆ ಬಿಡುಗಡೆ ಮಾಡಿ, 'ತ್ರಿಷಾ ಅವರು ಹಿಂದಿನಿಂದ ಮಾತ್ರವಲ್ಲದೆ ಈಗಲೂ ರಾಜಕೀಯದಲ್ಲಿ ತಟಸ್ಥ ನಿಲುವನ್ನು ಕಾಯ್ದುಕೊಂಡಿದ್ದಾರೆ. ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ. ರಾಜಕೀಯ ಕ್ಷೇತ್ರ‌ಕ್ಕಿಂತ ಹೆಚ್ಚಾಗಿ ವೃತ್ತಿಪರ ಕೆಲಸದಲ್ಲಿ ಮಾತ್ರ ಗುರುತಿಸಿಕೊಳ್ಳಲು ಬಯಸುತ್ತಾರೆ. ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿರುವವರು ಜವಾಬ್ದಾರಿಯುತವಾಗಿ ವರ್ತಿಸಬೇಕು ಜತೆಗೆ ಸಮಚಿತ್ತ ಕಾಪಾಡಿಕೊಳ್ಳಬೇಕು. ವೈಯಕ್ತಿಕ ಜೀವನವು ಸಾರ್ವಜನಿಕ ಚರ್ಚೆಯ ವಿಷಯವಾಗಿರಬಾರದು’ ಎಂದು ಹೇಳಿದ್ದರು.

ವಿಪಕ್ಷಗಳಿಂದ ಆಕ್ಷೇಪ

ನೈನಾರ್ ಹೇಳಿಕೆಗೆ ಆಡಳಿತಾರೂಢ ಡಿಎಂಕೆ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಡಿಎಂಕೆ ಪಕ್ಷದ ರಾಜ್ಯಸಭಾ ಸಂಸದೆ ಕನಿಮೋಳಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ನೈನಾರ್ ವಿರುದ್ಧ ಕಿಡಿಕಾರಿದ್ದು, 'ರಾಜಕೀಯದಲ್ಲಿರುವ ಯಾವೊಬ್ಬ ವ್ಯಕ್ತಿಯ ವೈಯಕ್ತಿಕ ಜೀವನವನ್ನು ಟೀಕಿಸುವುದು ಅಸಂಸ್ಕೃತಿಯಾಗಿದೆ. ಅಲ್ಲದೆ ಸಂಬಂಧವಿಲ್ಲದ ಯಾವುದೇ ಮಹಿಳೆಯ ಘನತೆ ಮತ್ತು ಗೌರವವನ್ನು ಕುಗ್ಗಿಸುವ ರೀತಿಯಲ್ಲಿ ಮಾತನಾಡುವುದು ಸ್ತ್ರೀತ್ವವನ್ನು ಹಾಳು ಮಾಡುವ ಕೃತ್ಯವಾಗಿದೆ. ನೈನಾರ್ ನಾಗೇಂದ್ರನ್ ಅವರ ಹೇಳಿಕೆಯನ್ನು ಬಿಜೆಪಿಯಲ್ಲಿರುವ ಮಹಿಳಾ ನಾಯಕಿಯರು ಖಂಡಿಸದೆ ಮೌನವಾಗಿರುವುದು ಅನ್ಯಾಯ' ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.