ADVERTISEMENT

'ಪುಲ್ವಾಮ ದಾಳಿ ಬಗ್ಗೆ ಮಾಹಿತಿ ಸಿಗುವವರೆಗೂ ಮೋದಿ ಆಹಾರ, ನೀರು ಸೇವಿಸಿರಲಿಲ್ಲ'

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2019, 6:21 IST
Last Updated 22 ಫೆಬ್ರುವರಿ 2019, 6:21 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಜಮ್ಮು ಕಾಶ್ಮೀರದ ಪುಲ್ವಾಮ ದಾಳಿ ನಡೆದು ದೇಶಕ್ಕೆ ದೇಶವೇ ಯೋಧರ ಸಾವಿನ ದುಃಖದಲ್ಲಿರುವಾಗ ಪ್ರಧಾನಿ ನರೇಂದ್ರ ಮೋದಿ ಜಿಮ್ ಕಾರ್ಬೆಚ್ ನ್ಯಾಷನಲ್ ಪಾರ್ಕ್ ನಲ್ಲಿ ಶೂಟಿಂಗ್‍ನಲ್ಲಿ ನಿರತರಾಗಿದ್ದರು ಎಂಬ ಕಾಂಗ್ರೆಸ್ ಆರೋಪಕ್ಕೆ ಕೇಂದ್ರ ಸರ್ಕಾರ ಪ್ರತಿಕ್ರಿಯಿಸಿದೆ.

ಪುಲ್ವಾಮ ದಾಳಿ ಬಗ್ಗೆ ಮೋದಿಯವರಿಗೆ ತಿಳಿದದ್ದು ತಡವಾಗಿ.ಹದಗೆಟ್ಟ ಹವಾಮಾನ ಮತ್ತು ನೆಟ್‍ವರ್ಕ್ ಸರಿ ಇಲ್ಲದ ಕಾರಣ ದಾಳಿ ಬಗ್ಗೆ ಮಾಹಿತಿ 25 ನಿಮಿಷ ತಡವಾಗಿ ತಿಳಿಯಿತು.ವಿಷಯ ತಿಳಿದ ಕೂಡಲೇ ಮೋದಿ ಅವರು ಅಲ್ಲಿಂದ ದೆಹಲಿಗೆ ಮರಳಲು ಸಿದ್ಧರಾಗಿದ್ದಾರೆ.ಆದರೆ ಹವಾಮಾನ ಸರಿ ಇಲ್ಲದ ಕಾರಣ ರಾತ್ರಿ ವಿಮಾನ ಏರಬೇಕಾಗಿ ಬಂತು ಎಂದು ಕೇಂದ್ರ ಸರ್ಕಾರದ ಮೂಲಗಳು ಹೇಳಿವೆ.

ಮೂಲಗಳ ಪ್ರಕಾರ ಪ್ರಧಾನಿ ಬೆಳಗ್ಗೆ 7 ಗಂಟೆಗೆ ಡೆಹ್ರಾಡೂನ್ ತಲುಪಿದ್ದರು. ಆದರೆ ಕೆಟ್ಟ ಹವಾಮಾನದಿಂದಾಗಿ 4 ಗಂಟೆ ಅಲ್ಲೇ ಬಾಕಿಯಾದರು. ಸರಿ ಸುಮಾರು 11.15ರ ವೇಳೆಗೆ ಅವರು ಜಿಮ್ ಕಾರ್ಬೆಟ್ ಪಾರ್ಕ್ತಲುಪಿದ ಅವರು ಟೈಗರ್ ಸಫಾರಿ, ಇಕೊ -ಟೂರಿಸಂ ವಲಯ ಮತ್ತು ರೆಸ್ಕ್ಯೂ ಸೆಂಟರ್ ಉದ್ಘಾಟನೆಗಾಗಿ ಮೂರು ಗಂಟೆ ವ್ಯಯಿಸಿದರು.ಆನಂತರ ಅವರು ಕಾಲಾಘರ್‌ನಿಂದ ಧಿಕಾಲಾ ಅರಣ್ಯಕ್ಕೆ ಮೊಟಾರ್ ಬೋಟ್ ಮೂಲಕ ಹೋಗಿದ್ದರು.

ADVERTISEMENT

ಮಧ್ಯಾಹ್ನ ರುದ್ರಾಪುರ್‌ನಲ್ಲಿ ಸಾರ್ವಜನಿಕ ರ್‍ಯಾಲಿಯಲ್ಲಿ ಅವರು ಭಾಗವಹಿಸಬೇಕಿತ್ತು. ಆದರೆ ಪುಲ್ವಾಮದಲ್ಲಿ ಉಗ್ರ ದಾಳಿ ನಡೆದಿದೆ ಎಂಬ ಸುದ್ದಿ ಕೇಳಿ ಬರುತ್ತಿದ್ದಂತೆ ಅವರು ಈ ರ್‍ಯಾಲಿಯನ್ನು ರದ್ದು ಮಾಡಿದ್ದರು.ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‍ಎಸ್ಎ)ಅಜಿತ್ ದೊಭಾಲ್, ಕೇಂದ್ರಗೃಹ ಸಚಿವ ರಾಜನಾಥ ಸಿಂಗ್ ಮತ್ತು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರಿಂದ ಮಾಹಿತಿ ಪಡೆದುಕೊಂಡ ನಂತರವೇ ಅವರು ರಾಮನಗರ್ ಅತಿಥಿ ಗೃಹಕ್ಕೆ ವಾಪಸ್ ಆಗಿದ್ದು.ಅಲ್ಲಿ ಹೋಗಿಯೂ ಅವರು ಈ ಮೂವರ ಜತೆ ಫೋನ್‍ನಲ್ಲಿ ನಿರಂತರ ಸಂಪರ್ಕದಲ್ಲಿದ್ದರು.

ದಾಳಿ ಬಗ್ಗೆ ತಡವಾಗಿ ಮಾಹಿತಿ ನೀಡಿದ್ದಕ್ಕಾಗಿ ಮೋದಿಯವರು ಸಿಟ್ಟುಗೊಂಡಿದ್ದರು.ಸಂಪೂರ್ಣ ಮಾಹಿತಿ ಲಭ್ಯವಾಗುವವರೆಗೆ ಅವರು ನೀರು, ಆಹಾರ ಏನೂ ಸೇವಿಸಿರಲಿಲ್ಲ.ಹೆಲಿಕಾಪ್ಟರ್ ಹಾರಾಟ ನಡೆಸಲು ಅನುಕೂಲಕರವಾದ ವಾತಾವರಣ ಇಲ್ಲದ ಕಾರಣ ಅವರು ರಾಮನಗರ್‌ದಿಂದ ಬರೇಲಿಗೆ ದುರ್ಗಮ ರಸ್ತೆಯಲ್ಲಿಯೇ ಪ್ರಯಾಣ ಮಾಡಿದ್ದರು.ಆ ದಿನ ಅವರು ದೆಹಲಿ ತಲುಪಿದಾಗ ರಾತ್ರಿಯಾಗಿತ್ತು ಎಂದು ಕೇಂದ್ರ ಸರ್ಕಾರದ ಮೂಲಗಳು ಕಾಂಗ್ರೆಸ್ ಆರೋಪಕ್ಕೆ ಪ್ರತ್ಯುತ್ತರ ನೀಡಿದೆ.

ಪುಲ್ವಾಮದಲ್ಲಿ ಫೆ. 14, ಗುರುವಾರ ಸಂಜೆ3.10ರ ವೇಳೆಗೆ ಉಗ್ರ ದಾಳಿ ನಡೆದಿತ್ತು.ಆ ಹೊತ್ತಲ್ಲಿ ಪ್ರಧಾನಿ ಮೋದಿ ಡಿಸ್ಕವರಿ ಚಾನೆಲ್‍ನ ಪ್ರೊಮೊಶನಲ್ ಫಿಲ್ಮ್ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದರು. ಈ ಶೂಟಿಂಗ್ ಸಂಜೆ 6.40ರ ವರೆಗೆ ಮುಂದುವರಿದಿತ್ತು. ಇಡೀ ದೇಶ ಯೋಧರ ಸಾವಿನ ದುಃಖದಲ್ಲಿ ಮುಳುಗಿದ್ದರೆ, ಮೋದಿ ಸಂಜೆವರೆಗೆ ಶೂಟಿಂಗ್ ‍ನಲ್ಲಿ ಬ್ಯುಸಿಯಾಗಿದ್ದರು. ನೀವು ಜಗತ್ತಿನಲ್ಲಿ ಎಲ್ಲಿಯಾದರೂ ಇಂಥಾ ಪ್ರಧಾನಿಯನ್ನು ನೋಡಿದ್ದೀರಾ? ಎಂದು ಕಾಂಗ್ರೆಸ್ ನೇತಾರ ರಣದೀಪ್ ಸುರ್ಜೇವಾಲಾ ಪ್ರಶ್ನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.