
ನವದೆಹಲಿ: ಕರ್ನಾಟಕದ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ವಿದೇಶಗಳಿಗೆ ರವಾನೆ ಮಾಡುವ ಮೂಲಕ ಗಮನಸೆಳೆಯುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ, ಮನ್ ಕಿ ಬಾತ್‌ನಲ್ಲಿ ಹೇಳಿದ್ದಾರೆ.
ಕರ್ನಾಟಕದ ನಂಜನಗೂಡಿನ ಬಾಳೆಹಣ್ಣು, ಮೈಸೂರಿನ ವೀಳ್ಯೆದೆಲೆ ಹಾಗೂ ಇಂಡಿಯಲ್ಲಿ ಬೆಳೆಯುವ ನಿಂಬೆಹಣ್ಣುಗಳನ್ನು ಅಲ್ಲಿನ ರೈತರು ಮಾಲ್ಡೀವ್ಸ್ ಸೇರಿದಂತೆ ಹಲವು ದೇಶಗಳಿಗೆ ರಪ್ತು ಮಾಡುತ್ತಿದ್ದಾರೆ. ಆ ಉತ್ಪನ್ನಗಳು ರುಚಿಯ ಜತೆ ಗುಣಮಟ್ಟವನ್ನು ಕೂಡ ಹೊಂದಿವೆ. ಅವುಗಳಿಗೆ ಜಿಐ ಟ್ಯಾಗ್ ಕೂಡ ಇದೆ ಎಂದು ತಿಳಿಸಿದ್ದಾರೆ.
ಇಂದಿನ ರೈತರು ಗುಣಮಟ್ಟದ ಕೃಷಿಯ ಜತೆ ಉತ್ಪನ್ನದ ಪ್ರಮಾಣವನ್ನು ಕೂಡ ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ನೆಲ, ಜಲವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವ ಮೂಲಕ ಉತ್ತಮ ಆದಾಯವನ್ನು ಕೂಡ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಒಡಿಶಾದ ಹಿರೋಡ್ ಪಟೇಲ್ ಎನ್ನುವ ಯುವ ಕೃಷಿಕನೊಬ್ಬ, ಹೊಸ ಮಾದರಿಯ ಕೃಷಿಯ ಮೂಲಕ ಗಮನ ಸೆಳೆಯುತ್ತಿದ್ದಾನೆ. ಕೃಷಿ ಹೊಂಡದಲ್ಲಿ ತರಕಾರಿ ಬೆಳೆದರೆ, ಅದರ ಸುತ್ತ ಬಾಳೆಹಣ್ಣು, ತೆಂಗನ್ನು ಬೆಳೆಯುತ್ತಿದ್ದಾನೆ. ಆ ಹೊಂಡದಲ್ಲೇ ಮೀನು ಸಾಕಾಣಿಕೆಯನ್ನು ಕೂಡ ಮಾಡುತ್ತಿದ್ದಾನೆ. ಅದನ್ನು ವೀಕ್ಷಿಸಲು ದೂರದೂರಿನಿಂದ ರೈತರು ಅವರ ತೋಟಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕೇರಳದ ತ್ರಿಶೂರ್‌ನ ಹಳ್ಳಿಯೊಂದರಲ್ಲಿ 570 ವಿವಿಧ ತಳಿಯ ಭತ್ತವನ್ನು ಯಶಸ್ವಿಯಾಗಿ ಬೆಳೆಯುವ ಮೂಲಕ ಅಲ್ಲಿನ ರೈತರು ಗಮನಸೆಳೆದಿದ್ದಾರೆ ಎಂದು ಹೇಳಿದ್ದಾರೆ.
ಕೃಷಿ ಉತ್ಪನ್ನಗಳ ರಫ್ತು ಹೆಚ್ಚಾಗುತ್ತಿರುವುದು ದೇಶದ ರೈತರ ಪರಿಶ್ರಮವನ್ನು ತೋರಿಸುತ್ತದೆ. ಅವರು ಮಣ್ಣಿನ ನಿಜವಾದ ಆರಾಧಕರು. ಅವರು ಮಣ್ಣನ್ನು ಚಿನ್ನವಾಗಿಸುವ ಸಾಮಥ್ಯ ಹೊಂದಿದ್ದಾರೆ ಎಂದು ಹೇಳಿದ್ದಾರೆ.
ಭಾರತವು ಪ್ರತಿವರ್ಷ 150 ಮಿಲಿಯನ್ ಟನ್ ಭತ್ತವನ್ನು ಉತ್ಪಾದಿಸುವ ಮೂಲಕ ಜಗತ್ತಿನ ಅತಿದೊಡ್ಡ ಭತ್ತ ಬೆಳೆಯುವ ದೇಶವಾಗಿದೆ. ಇದರಿಂದ ದೇಶದ ಅವಶ್ಯಕತೆಯನ್ನು ಮೀರಿ ನಾವು ಜಾಗತಿಕವಾಗಿ ರಫ್ತು ಮಾಡಲು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.
ಹಲವು ರೈತರು ಸಂಪ್ರದಾಯಿಕ ಕೃಷಿಯ ಜತೆ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಕೃಷಿ ಉತ್ಪನ್ನಗಳ ಮಾರುಕಟ್ಟೆಯನ್ನು ವಿಸ್ತರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.