ADVERTISEMENT

ನ್ಯಾಷನಲ್ ಹೆರಾಲ್ಡ್‌ ಪ್ರಕರಣ: ಎಜೆಎಲ್‌ ಪುನರುಜ್ಜೀವನಗೊಳಿಸಲು ಎಐಸಿಸಿ ಪ್ರಯತ್ನ

ಪಿಟಿಐ
Published 5 ಜುಲೈ 2025, 14:03 IST
Last Updated 5 ಜುಲೈ 2025, 14:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ದೇಶದ ಸ್ವಾತಂತ್ರ್ಯ ಚಳವಳಿಯ ಭಾಗವಾಗಿದ್ದ ಅಸೋಸಿಯೇಟೆಡ್‌ ಜರ್ನಲ್ಸ್‌ ಲಿಮಿಟೆಡ್‌ (ಎಜೆಎಲ್‌)ಗೆ ಸೇರಿದ ಆಸ್ತಿಗಳನ್ನು ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ (ಎಐಸಿಸಿ) ಪಕ್ಷವು ಮಾರಾಟ ಮಾಡಲು ಮುಂದಾಗಿರಲಿಲ್ಲ, ಬದಲಾಗಿ ಸಂಸ್ಥೆಯನ್ನು ಪುನರುಜ್ಜೀವನಗೊಳಿಸುವ ಉದ್ದೇಶ ಹೊಂದಿತ್ತು’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪರ ಹಾಜರಾಗಿದ್ದ ಹಿರಿಯ ವಕೀಲ ಆರ್‌.ಎಸ್‌.ಚೀಮಾ ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ವಿಶೇಷ ನ್ಯಾಯಾಧೀಶ ವಿಶಾಲ್‌ ಗೋಗ್ನೆ ಮುಂದೆ ಚೀಮಾ ಅವರು ಈ ವಾದ ಮಂಡಿಸಿದರು.

ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ದಿವಂಗತ ಮೋತಿಲಾಲ್‌ ವೋರಾ, ಆಸ್ಕರ್‌ ಫೆರ್ನಾಂಡಿಸ್‌ ಮತ್ತು ಸುಮನ್‌ ದುಬೆ, ಸ್ಯಾಮ್‌ ಪಿತ್ರೋಡಾ ಹಾಗೂ ಯಂಗ್‌ ಇಂಡಿಯಾ ಖಾಸಗಿ ಕಂಪನಿಯ ಮೂಲಕ ಸಂಚು ರೂಪಿಸಿ, ಅಕ್ರಮ ಹಣ ವರ್ಗಾವಣೆಯ ಮೂಲಕ ‘ನ್ಯಾಷನಲ್‌ ಹೆರಾಲ್ಡ್‌’ ಪತ್ರಿಕೆ ಪ್ರಕಟಿಸುತ್ತಿದ್ದ ಎಜೆಎಲ್‌ಗೆ ಸೇರಿದ್ದ ಸುಮಾರು ₹2 ಸಾವಿರ ಕೋಟಿ ಮೌಲ್ಯದ ಆಸ್ತಿಗಳನ್ನು ಅಕ್ರಮವಾಗಿ ವಶಕ್ಕೆ ಪಡೆದಿದ್ದರು ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಆರೋಪಿಸಿತ್ತು.

ADVERTISEMENT

‘ಎಜೆಎಲ್‌ ಟ್ರಸ್ಟ್‌ನ ಜ್ಞಾಪನಾ ಪತ್ರವನ್ನು (ಎಂಒಎ) ಸಲ್ಲಿಸಲು ಇ.ಡಿ ಪರ ವಕೀಲರು ಏಕೆ ಹಿಂಜರಿದರು ಎಂದು ತಿಳಿಸಬಲ್ಲಿರಾ? ಏಕೆಂದರೆ, ಎಜೆಎಲ್‌ ಸಂಸ್ಥೆಯನ್ನು 1937ರಲ್ಲಿ ಜವಾಹಾರ್‌ ಲಾಲ್‌ ನೆಹರೂ, ಜೆ.ಬಿ.ಕೃಪಲಾನಿ ಹಾಗೂ, ರಫಿ ಅಹಮ್ಮದ್‌ ಕಿದ್ವಾಯಿ ಹಾಗೂ ಇತರರು ಸೇರಿ ಆರಂಭಿಸಿದ್ದರು’ ಎಂದು ನ್ಯಾಯಾಲಯದ ಗಮನಸೆಳೆದರು.

‘ಎಜೆಎಲ್‌ ಎಂಒಎ ಪ್ರಕಾರ, ಎಜೆಎಲ್‌ನ ನೀತಿಯೂ ಕಾಂಗ್ರೆಸ್‌ನ ನೀತಿಯ ಭಾಗವೇ ಆಗಿರುತ್ತದೆ. ಆದರೂ, ಎಜೆಎಲ್‌ ಎಂದಿಗೂ ಲಾಭ ಗಳಿಸಿರಲಿಲ್ಲ. ಸ್ವಾತಂತ್ರ್ಯಪೂರ್ವದಲ್ಲಿ ಯಾವತ್ತಿಗೂ ವಾಣಿಜ್ಯ ಉದ್ದೇಶದ ಸಂಸ್ಥೆ ಆಗಿರಲಿಲ್ಲ. ದೇಶದ ಸ್ವಾತಂತ್ರ ಚಳವಳಿಯ ಭಾಗವಾಗಿದ್ದ ಸಂಸ್ಥೆಯನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಎಐಸಿಸಿಯು ಮುಂದಾಗಿತ್ತು. ಎಜೆಎಲ್‌ಗೆ ನೀಡಿದ ಸಾಲ ಮರುಪಡೆಯುವುದು ಸಮಸ್ಯೆಯಲ್ಲ, ಅದನ್ನ ಪುನರುಜ್ಜೀವನಗೊಳಿಸುವುದಾಗಿದೆ. ಮಾರಾಟದಿಂದ ಲಾಭ ಪಡೆಯುವ ಉದ್ದೇಶವನ್ನು ಎಐಸಿಸಿ ಹೊಂದಿರಲಿಲ್ಲ’ ಎಂದು ನ್ಯಾಯಾಲಯಕ್ಕೆ ತಿಳಿಸಿದರು. 

‘ಯಂಗ್‌ ಇಂಡಿಯನ್‌ ಸಂಸ್ಥೆಯಲ್ಲಿ ರಾಹುಲ್‌ ಗಾಂಧಿ ಅವರು ಶೇ 76ರಷ್ಟು ಪಾಲು ಹೊಂದಿದ್ದರು. ₹90 ಕೋಟಿ ಸಾಲಕ್ಕೆ ಬದಲಿಯಾಗಿ ಎಜೆಎಲ್‌ನ ಆಸ್ತಿಗಳನ್ನು ಕಬಳಿಸಲಾಗಿತ್ತು’ ಎಂದು ಇ.ಡಿ. ಆರೋಪಿಸಿತ್ತು.

ಶುಕ್ರವಾರ ಸೋನಿಯಾ ಗಾಂಧಿ ಅವರ ಪರವಾಗಿ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.