
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದ ಆದೇಶದ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿದ ಅರ್ಜಿ ಕುರಿತು ಪ್ರತಿಕ್ರಿಯಿಸುವಂತೆ ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಇತರರಿಗೆ ದೆಹಲಿ ಹೈಕೋರ್ಟ್ ಸೂಚಿಸಿದೆ.
ಪ್ರಕರಣ ಸಂಬಂಧ ಡಿಸೆಂಬರ್ 16ರಂದು ದೆಹಲಿ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ತಡೆ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ಮೇರೆಗೆ ನ್ಯಾಯಮೂರ್ತಿ ರವೀಂದರ್ ದುಡೇಜಾ ಅವರು ಗಾಂಧಿ ಕುಟುಂಬ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಯನ್ನು 2026ರ ಮಾರ್ಚ್ 12ಕ್ಕೆ ಮುಂದೂಡಿದ್ದಾರೆ.
ಈ ಪ್ರಕರಣದಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಇ.ಡಿ ಪರ ವಾದ ಮಂಡಿಸಿದರೆ, ಹಿರಿಯ ವಕೀಲರಾದ ಅಭಿಷೇಕ್ ಸಿಂಘ್ವಿ ಮತ್ತು ಆರ್.ಎಸ್. ಚೀಮಾ ಗಾಂಧಿ ಕುಟುಂಬ ಪರ ವಕಾಲತ್ತು ವಹಿಸಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿ ಇತರೆ ಐವರು ಆರೋಪಿಗಳ ವಿರುದ್ಧ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ಡೆಯಡಿ (ಪಿಎಂಎಲ್‌ಎ) ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಆರೋಪ ಪಟ್ಟಿಯನ್ನು ದೆಹಲಿ ವಿಚಾರಣಾ ನ್ಯಾಯಾಲಯ ಡಿ.16ರಂದು ತಿರಸ್ಕರಿಸಿತ್ತು.
‘ಎಫ್‌ಐಆರ್ ಇಲ್ಲದೆ ಖಾಸಗಿ ದೂರಿನ ಆಧಾರದ ಮೇಲೆ ಸಲ್ಲಿಸಿರುವ ಆರೋಪ ಪಟ್ಟಿಯನ್ನು ಪರಿಗಣಿಸಲು ಸಾಧ್ಯವಿಲ್ಲ. ಕಾನೂನಿನಡಿ ಇದನ್ನು ಅನುಮತಿಸಲಾಗದು‘ ಎಂದು ವಿಶೇಷ ನ್ಯಾಯಮೂರ್ತಿ ವಿಶಾಲ್ ಗೋಗ್ನೆ ಹೇಳಿದ್ದರು.
‘ಈ ಪ್ರಕರಣದಲ್ಲಿ ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ತನಿಖಾ ವಿಭಾಗವು ಈಗಾಗಲೇ ಎಫ್‌ಐಆರ್ ದಾಖಲಿಸಿದೆ. ಹೀಗಿರುವಾಗ ಖಾಸಗಿ ವ್ಯಕ್ತಿಯೊಬ್ಬರ ದೂರಿನ ತನಿಖೆ ಆಧಾರದಲ್ಲಿ ಇ.ಡಿ ಸಲ್ಲಿಸಿರುವ ಆರೋಪ ಪಟ್ಟಿ ಪರಿಗಣಿಸುವುದು, ತೀರ್ಪು ನೀಡುವುದು ಅಪಕ್ವ ಎನಿಸುತ್ತದೆ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿತ್ತು.
ಏನಿದು ಪ್ರಕರಣ?
ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ದಿವಂಗತ ಮೋತಿಲಾಲ್ ವೊರಾ ಮತ್ತು ಆಸ್ಕರ್ ಫೆರ್ನಾಂಡಿಸ್, ಸುಮನ್ ದುಬೆ, ಸ್ಯಾಮ್ ಪಿತ್ರೋಡಾ ಸೇರಿ ಯಂಗ್ ಇಂಡಿಯನ್ ಕಂಪನಿ ಮೂಲಕ ಸಂಚು ರೂಪಿಸಿ ‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆ ಪ್ರಕಟಿಸುತ್ತಿದ್ದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ಗೆ (ಎಜೆಎಲ್) ಸೇರಿದ್ದ ಸುಮಾರು ₹2 ಸಾವಿರ ಕೋಟಿ ಮೌಲ್ಯದ ಆಸ್ತಿಯನ್ನು ಅಕ್ರಮವಾಗಿ ವಶಕ್ಕೆ ಪಡೆದಿದ್ದರು ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಆರೋಪಿಸಿತ್ತು.
ಯಂಗ್ ಇಂಡಿಯನ್ ಕಂಪನಿಯಲ್ಲಿ ಶೇ 76ರಷ್ಟು ಪಾಲನ್ನು ಗಾಂಧಿ ಕುಟುಂಬ ಹೊಂದಿದ್ದು, ₹90 ಕೋಟಿ ಸಾಲಕ್ಕೆ ಬದಲಾಗಿ ಎಜೆಎಲ್‌ನ ಆಸ್ತಿಯನ್ನು ಮೋಸದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಇ.ಡಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ಡೆಯಡಿ ಆರೋಪ ಪಟ್ಟಿ ಸಲ್ಲಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.