ADVERTISEMENT

ಪ್ರಕೃತಿಯನ್ನು ಸಂರಕ್ಷಿಸಿ, ಪೋಷಿಸಿ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮನವಿ

‘ಪ್ರಕೃತಿ ವಂದನಾ‘ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಾಗವತ್‌

ಪಿಟಿಐ
Published 30 ಆಗಸ್ಟ್ 2020, 11:12 IST
Last Updated 30 ಆಗಸ್ಟ್ 2020, 11:12 IST
ಮೋಹನ್ ಭಾಗವತ್
ಮೋಹನ್ ಭಾಗವತ್   

ನಾಗ್ಪುರ: ‘ಪ್ರಕೃತಿಯಲ್ಲಿರುವ ಎಲ್ಲ ಸಂಪನ್ಮೂಲಗಳನ್ನು ಬಳಸುವುದು ಮಾತ್ರವಲ್ಲ, ಪರಿಸರವನ್ನು ಸಂರಕ್ಷಿಸುವುದು, ಪೋಷಿಸುವುದು ನಮ್ಮ ಜವಾಬ್ದಾರಿಯಾಗಬೇಕು’ ಎಂದು ರಾಷ್ಟ್ರೀಯ ಸ್ವಯಂಸೇವಾ ಸಂಘದ(ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್ ಭಾಗವತ್‌ ಅವರು ಅಭಿಪ್ರಾಯಪಟ್ಟರು.

ಹಿಂದೂ ಆಧ್ಯಾತ್ಮಿಕ ಸೇವಾ ಪ್ರತಿಷ್ಠಾನ ಭಾನುವಾರ ಆಯೋಜಿಸಿದ್ದ‘ಪ್ರಕೃತಿ ವಂದನಾ‘ ವರ್ಚುವಲ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್ ಅವರು, ‘ನಮ್ಮ ಪೂರ್ವಜರು ಪ್ರಕೃತಿಯನ್ನು ತಮ್ಮ ಜೀವನದ ಒಂದು ಅಂಗವಾಗಿ ಪೋಷಿಸುತ್ತಿದ್ದರು. ಅದೇ ರೀತಿ ನಾವು ಕೂಡ ಪೋಷಿಸಬೇಕು‘ ಎಂದರು.

‘ನಾವು ಪ್ರಕೃತಿಯಿಂದ ಹಲವು ಲಾಭವನ್ನು ಪಡೆಯುತ್ತೇವೆ. ನಮ್ಮ ಬೇಡಿಕೆಗಳನ್ನು ಪೂರೈಸುವುದು ಪ್ರಕೃತಿಯ ಜವಾಬ್ದಾರಿ ಅಲ್ಲ. ಆದರೂ ನಾವು ಕಳೆದ 250 ವರ್ಷಗಳಿಂದ ಅದರ ಸಂಪನ್ಮೂಲವನ್ನು ಅತಿಯಾಗಿ ಬಳಸುತ್ತಿದ್ದೇವೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ನಮಗೆ ತಿಳಿಯಲಿದೆ. ಒಂದು ವೇಳೆ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಯಾವುದೂ ಉಳಿಯುವುದಿಲ್ಲ. ಈ ಎಲ್ಲವನ್ನೂ ಸರಿಪಡಿಸುವುದಕ್ಕಾಗಿ ಪರಿಸರ ದಿನವನ್ನು ಆಚರಿಸುತ್ತಿರುತ್ತೇವೆ ’ ಎಂದು ಅವರು ಹೇಳಿದರು.

ADVERTISEMENT

ನಮ್ಮ ಪ್ರತಿಯೊಂದು ಹಬ್ಬಗಳು ಪರಿಸರಕ್ಕೆ ಪೂರಕವಾಗಿವೆ. ನಾಗರಪಂಚಮಿ, ಗೋವರ್ದನ ಪೂಜೆ, ತುಳಸಿ ವಿವಾಹ.. ಇಂಥ ಹಬ್ಬಗಳನ್ನು ಈ ಪೀಳಿಗೆಯವರೂ ಆಚರಿಸುವಂತೆ ಉತ್ತೇಜಿಸಬೇಕು. ಹಬ್ಬ ಆಚರಿಸುವ ಮೂಲಕ ಅವರು ಪರಿಸರದ ಭಾಗವಾಗುವಂತೆ ಮಾಡಬೇಕು‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.