ADVERTISEMENT

ಗೃಹಿಣಿಯರಿಗೆ ಮಾಸಿಕ ₹2000, ವರ್ಷಕ್ಕೆ 8 ಎಲ್‌ಪಿಜಿ ಸಿಲಿಂಡರ್ ಉಚಿತ: ಸಿಧು ಘೋಷಣೆ

ಪಿಟಿಐ
Published 3 ಜನವರಿ 2022, 12:33 IST
Last Updated 3 ಜನವರಿ 2022, 12:33 IST
ನವಜೋತ್ ಸಿಂಗ್ ಸಿಧು
ನವಜೋತ್ ಸಿಂಗ್ ಸಿಧು   

ಚಂಡೀಗಡ: ಮುಂಬರುವ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷವು ಅಧಿಕಾರಕ್ಕೆ ಬಂದಲ್ಲಿ ಗೃಹಿಣಿಯರಿಗೆ ಮಾಸಿಕ ₹2000 ಮತ್ತು ಪ್ರತಿ ವರ್ಷ ಎಂಟು ಅಡುಗೆ ಅನಿಲ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡುವುದಾಗಿ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಭರವಸೆ ನೀಡಿದ್ದಾರೆ.

ಚುನಾವಣೆ ಸಮೀಪಿಸುತ್ತಿರುವಂತೆಯೇ ಮತದಾರರನ್ನು ಸೆಳೆಯಲು ಹೊಸ ವಾಗ್ದಾನ ನೀಡಿರುವ ಸಿಧು, ಉನ್ನತ ವ್ಯಾಸಂಗಕ್ಕಾಗಿ ಕಾಲೇಜು ಪ್ರವೇಶ ಪಡೆಯುವ ಹೆಣ್ಮಕ್ಕಳಿಗೆ ದ್ವಿಚಕ್ರ ವಾಹನ ಹಾಗೂ ಕಂಪ್ಯೂಟರ್ ಉಚಿತವಾಗಿ ನೀಡುವುದಾಗಿ ತಿಳಿಸಿದರು.

ಹಾಗೆಯೇ 12ನೇ ತರಗತಿ ಉತ್ತೀರ್ಣರಾದ ಹೆಣ್ಮಕ್ಕಳಿಗೆ ₹20,000, 10ನೇ ತರಗತಿ ತೇರ್ಗಡೆ ಹೊಂದಿದ ಬಾಲಕಿಯರಿಗೆ ₹15,000 ಮತ್ತು ಐದನೇ ತರಗತಿ ಪಾಸ್ ಆದ ಬಾಲಕಿಯರಿಗೆ ₹5,000 ನೀಡುವುದಾಗಿ ವಾಗ್ದಾನ ಮಾಡಿದರು.

ಮಹಿಳೆಯರ ಸಬಲೀಕರಣದ ಅವಶ್ಯಕತೆಯ ಬಗ್ಗೆ ಸಿಧು ಪ್ರತಿಪಾದಿಸಿದ್ದಾರೆ. ಮಹಿಳೆಯರ ಹೆಸರಿಗೆ ಆಸ್ತಿ ವರ್ಗಾವಣೆಯನ್ನು ಉಚಿತವಾಗಿ ಮಾಡಿಕೊಡಲಾಗುವುದು ಎಂದು ಹೇಳಿದರು. ರಾಜ್ಯದ ಮಹಿಳೆಯರಿಗಾಗಿ 28 ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸುವುದಾಗಿ ತಿಳಿಸಿದರು.

ಆಮ್ ಆದ್ಮಿ ಪಕ್ಷದ (ಎಎಪಿ) ಮುಖಂಡ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ ಹಾಗೂ ಗೋವಾ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಸಾವಿರ ರೂಪಾಯಿ ಹಾಗೂ ಗೃಹ ಬಳಕೆಗೆ 300 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.