ADVERTISEMENT

34 ವರ್ಷ ಹಳೆಯ ಹಲ್ಲೆ ಪ್ರಕರಣ: ನಾಳೆ ನವಜೋತ್ ಸಿಂಗ್ ಸಿಧು ಜೈಲಿನಿಂದ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಮಾರ್ಚ್ 2023, 14:00 IST
Last Updated 31 ಮಾರ್ಚ್ 2023, 14:00 IST
ನವಜೋತ್ ಸಿಂಗ್ ಸಿಧು
ನವಜೋತ್ ಸಿಂಗ್ ಸಿಧು   

ಚಂಡೀಗಢ: ‘ರಸ್ತೆಯಲ್ಲಿ ರೋಷಾವೇಶ ತೋರಿದ ಪ್ರಕರಣದಲ್ಲಿ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸುತ್ತಿರುವ ಕಾಂಗ್ರೆಸ್‌ ನಾಯಕ ನವಜೋತ್‌ ಸಿಂಗ್‌ ಸಿಧು ಅವರು ಏ.1ರಂದು ಸನ್ನಡತೆಯ ಆಧಾರದಲ್ಲಿ ಬಿಡುಗಡೆಯಾಗಲಿದ್ದಾರೆ’ ಎಂದು ಸಿಧು ಪರ ವಕೀಲ ಎಚ್‌ಪಿಎಸ್‌ ವರ್ಷಾ ಶುಕ್ರವಾರ ತಿಳಿಸಿದರು.

59 ವರ್ಷದ ಸಿಧು ಅವರು ಸದ್ಯ ಪಟಿಯಾಲ ಜೈಲಿನಲ್ಲಿದ್ದಾರೆ. 1988ರಲ್ಲಿ ನಡೆದಿದ್ದ ಅಪಘಾತದಲ್ಲಿ 65 ವರ್ಷದ ಗುರ್ನಾಮ್‌ ಸಿಂಗ್‌ ಎಂಬುವವರು ಮೃತಪಟ್ಟಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೊರ್ಟ್‌, ಸಿಧು ಅವರಿಗೆ ಒಂದು ವರ್ಷ ಕಾರಾಗೃಹ ಶಿಕ್ಷೆ ನೀಡಿತ್ತು. ಇದರ ಅನುಸಾರ ಸಿಧು ಅವರು ಕಳೆದ ವರ್ಷ ಮೇ 20ರಂದು ಪಟಿಯಾಲ ನ್ಯಾಯಾಲಯಕ್ಕೆ ಶರಣಾಗಿದ್ದರು.

‘ಇಂಥ ಪ್ರಕರಣದಲ್ಲಿ ಅಪರಾಧಿಗೆ ಕಡಿಮೆ ಶಿಕ್ಷೆ ವಿಧಿಸುವುದು ಎಂದರೆ, ಅದು ನ್ಯಾಯಾಂಗ ವ್ಯವಸ್ಥೆಯನ್ನು ಹಾನಿ ಮಾಡಿದಂತಾಗುತ್ತದೆ. ಜೊತೆಗೆ, ಕಾನೂನಿನ ಬಗ್ಗೆ ಸಾರ್ವಜನಿಕರಲ್ಲಿ ಇರುವ ನಂಬಿಕೆಯನ್ನು ದುರ್ಬಲಗೊಳಿಸಿದಂತಾಗುತ್ತದೆ’ ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು.

ADVERTISEMENT

‘ಸನ್ನಡತೆ ತೋರಿದ ಅಪರಾಧಿಯನ್ನು ಬಿಡುಗಡೆ ಮಾಡಲು ಪಂಜಾಬ್‌ ಕಾರಾಗೃಹ ಕಾನೂನು ಅನುವು ಮಾಡಿಕೊಡುತ್ತದೆ. ಅವರು ಶನಿವಾರದಂದು (ಏ.1) ಪಟಿಯಾಲಾ ಜೈಲಿನಿಂದ ಬಿಡುಗಡೆ ಆಗುವ ಸಾಧ್ಯತೆ ಇದೆ’ ಎಂದು ವಕೀಲ ವರ್ಮಾ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.