ADVERTISEMENT

ಆಂಧ್ರಪ್ರದೇಶ: ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ಮದ್ವಿ ಹಿದ್ಮಾ ಸೇರಿ 6 ಮಂದಿ ಹತ್ಯೆ

ಪಿಟಿಐ
Published 18 ನವೆಂಬರ್ 2025, 5:59 IST
Last Updated 18 ನವೆಂಬರ್ 2025, 5:59 IST
<div class="paragraphs"><p>ಮದ್ವಿ ಹಿದ್ಮಾ</p></div>

ಮದ್ವಿ ಹಿದ್ಮಾ

   

ವಿಶಾಖಪಟ್ಟಣ: ಮಾವೊವಾದಿ ಸಂಘಟನೆಯ  ಕೇಂದ್ರ ಸಮಿತಿ ಸದಸ್ಯ, ನಕ್ಸಲ್‌ ಮಿಲಿಟರಿ ಕಾರ್ಯಾಚರಣೆಗಳ ‘ಮಾಸ್ಟರ್‌ ಮೈಂಡ್‌‘ ಎಂದೇ ಹೆಸರಾಗಿದ್ದ ಛತ್ತೀಸಗಢದ ಮಾಡವಿ ಹಿಡಮಾ (55) ಮತ್ತು ಆತನ ಪತ್ನಿ ಮದಕಂ ರಾಜೆ ಸೇರಿದಂತೆ ಆರು ನಕ್ಸಲರನ್ನು ಆಂಧ್ರಪ್ರದೇಶ ಪೊಲೀಸರು ಮಂಗಳವಾರ ಇಲ್ಲಿನ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ.

ಛತ್ತೀಸಗಢದಲ್ಲಿ ನಕ್ಸಲರ ವಿರುದ್ಧ ಆ‍ಪರೇಷನ್‌ ಬ್ಲ್ಯಾಕ್‌ ಫಾರೆಸ್ಟ್‌ (ಆಪರೇಷನ್‌ ಕಾಗರ್‌) ಕಾರ್ಯಾಚರಣೆ ತೀವ್ರಗೊಂಡ ಬೆನ್ನಲ್ಲೇ, ಮಾಡವಿ ಹಿಡಮಾ, ಪತ್ನಿ ಮತ್ತು ತನ್ನ ನಾಲ್ವರು ಭದ್ರತಾ ಸಿಬ್ಬಂದಿ ಜತೆಗೆ ಆಂಧ್ರಪ್ರದೇಶಕ್ಕೆ ಸ್ಥಳಾಂತರಗೊಳ್ಳಲು ಯೋಜನೆ ರೂಪಿಸಿದ್ದರು. 

ADVERTISEMENT

‘ಆಂಧ್ರಪ್ರದೇಶ–ಛತ್ತೀಸಗಢ–ಓಡಿಶಾ ಗಡಿಯಲ್ಲಿ ಇತ್ತೀಚೆಗೆ ನಕ್ಸಲರ ಓಡಾಟ ಹೆಚ್ಚಿದೆ ಎಂದು ಗುಪ್ತಚರ ಮಾಹಿತಿ ಲಭಿಸಿತ್ತು. ಮಂಗಳವಾರ ಮರೆಡುಮಿಲ್ಲಿ ಮಂಡಲದ ಅರಣ್ಯ ಪ್ರದೇಶದ ಮೂಲಕ ಹಿಡಮಾ ಮತ್ತು ತಂಡ ಆಂಧ್ರ ಪ್ರವೇಶಿಸುವ ಪ್ರಯತ್ನದಲ್ಲಿದ್ದಾಗ, ಎನ್‌ಕೌಂಟರ್‌ನಲ್ಲಿ ಅವರನ್ನು ಹತ್ಯೆ ಮಾಡಲಾಯಿತು’ ಎಂದು ಆಂಧ್ರಪ್ರದೇಶದ ಗುಪ್ತಚರ ವಿಭಾಗದ ಎಡಿಜಿಪಿ ಮಹೇಶ್‌ ಚಂದ್ರ ಲಡ್ಡಾ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.  

ಛತ್ತೀಸಗಢದ ಸುಕ್ಮಾ ಜಿಲ್ಲೆಯ ಪೂವರ್ತಿ ಗ್ರಾಮದ ಹಿಡಮಾ, ಎರಡು ದಶಕಗಳಿಂದೀಚೆಗೆ ದೇಶದಲ್ಲಿ ನಡೆದಿರುವ ಎಲ್ಲ ಪ್ರಮುಖ ನಕ್ಸಲ್‌ ದಾಳಿಗಳ ಹಿಂದಿನ ಸೂತ್ರಧಾರನಾಗಿದ್ದ.  ಪೀಪಲ್ಸ್‌ ಲಿಬರೇಷನ್‌ ಗೆರಿಲ್ಲಾ ಆರ್ಮಿಯ (ಪಿಎಲ್‌ಜಿಎ) ಬೆಟಾಲಿಯನ್-1ರ ಕಮಾಂಡರ್‌ ಆಗಿದ್ದ ಹಿಡಮಾನ ಭಾವಚಿತ್ರವನ್ನು ಇತ್ತೀಚೆಗೆ ಪೊಲೀಸರು ಬಿಡುಗಡೆ ಮಾಡುವವರೆಗೂ ಈತನ ರೂಪ ಮತ್ತು ವಯಸ್ಸು ನಿಗೂಢವಾಗಿಯೇ ಉಳಿದಿತ್ತು.  

‘ಮರೆಡುಮಿಲ್ಲಿ ಮಂಡಲದ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಬೆಳಗಿನ ಜಾವ 6.30ರಿಂದ 7ರ ನಡುವೆ ಎನ್‌ಕೌಂಟರ್‌ ನಡೆದಿದೆ. ಹತ್ಯೆಯಾದವರಲ್ಲಿ  ಇಬ್ಬರು ಮಹಿಳೆಯರು, ನಾಲ್ವರು ಪುರುಷರು ಸೇರಿದ್ದಾರೆ. ಕೆಲವರು ತಪ್ಪಿಸಿಕೊಂಡಿದ್ದಾರೆ’ ಎಂದು ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿ ಅಮಿತ್‌ ಬಾರ್ದರ್‌ ಹೇಳಿದ್ದಾರೆ. 

ಹಿಡಮಾ, ಪತ್ನಿ ಮದಕಂ ರಾಜೆ ಜತೆಗೆ ಅವರ ಭದ್ರತಾ ಸಿಬ್ಬಂದಿ ದೇವಿ, ಲಕ್ಮಲ್‌ (ಚೈತು), ಮಲ್ಲ (ಮಲ್ಲಲು) ಮತ್ತು ಕಮಲು (ಕಮಲೇಶ್‌) ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿದ್ದಾರೆ. ಹಿಡಮಾನ ಎನ್‌ಕೌಂಟರ್‌ನಿಂದ ಬಸ್ತಾರ್‌ ವಲಯದ ನಕ್ಸಲ್‌ ಚಳವಳಿಯ ಶವಪೆಟ್ಟಿಗೆ ಮೇಲೆ ಕೊನೆಯ ಮೊಳೆ ಹೊಡೆದಂತಾಗಿದೆ’ ಎಂದು  ಛತ್ತೀಸಗಢ ಪೊಲೀಸರು ಹೇಳಿದ್ದಾರೆ.

ಎನ್‌ಕೌಂಟರ್‌ ನಡೆದ ಸ್ಥಳದಿಂದ ಎರಡು ಎಕೆ–47 ರೈಫಲ್‌, ಒಂದು ಪಿಸ್ತೂಲ್‌, ಸ್ಫೋಟಕಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಶಕ್ತಿಶಾಲಿ ಬಟಾಲಿಯನ್‌

ಮಾವೊವಾದಿ ಸಂಘಟನೆಯ ಶ್ರೇಣಿ ವ್ಯವಸ್ಥೆಯಲ್ಲಿ ಎಲ್ಲ ಪ್ರಮುಖ ಹುದ್ದೆಗಳನ್ನು ಹಿಡಮಾ ನಿಭಾಯಿಸಿದ್ದರು. ಸಂಘಟನೆಯ ಮಿಲಿಟರಿ ಕಾರ್ಯಾಚರಣೆಯ ಮುಖ್ಯಸ್ಥರಾಗಿದ್ದ ಅವರು ಇತ್ತೀಗೆಷ್ಟೇ  ದಂಡಕಾರಣ್ಯ ವಿಶೇಷ ವಲಯ ಸಮಿತಿಯ (ಡಿಎಸ್‌ಜೆಡ್‌ಸಿ) ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ಹಿಡಮಾ ಅವರು ಸಂತೋಷ್‌ ಸೇರಿ ಹಲವು ಹೆಸರುಗಳಿಂದಲೂ ಗುರುತಿಸಿಕೊಂಡಿದ್ದರು. ಹಿಡಮಾ ಮುನ್ನಡೆಸುತ್ತಿದ್ದ ‘ಪಿಎಲ್‌ಜಿಎ’ ಬಟಾಲಿಯನ್‌–1  ದಂಡಕಾರಣ್ಯ ವಿಶೇಷ ವಲಯ ಸಮಿತಿಯ ಅತ್ಯಂತ ಶಕ್ತಿಶಾಲಿ ಘಟಕವಾಗಿದೆ. ಛತ್ತೀಸಗಢದ ಬಸ್ತಾರ್‌  ಮಾತ್ರವಲ್ಲ ಆಂಧ್ರಪ್ರದೇಶ ಓಡಿಶಾ ತೆಲಂಗಾಣ ಮಹಾರಾಷ್ಟ್ರದಲ್ಲೂ ಈ ಘಟಕ ಸಕ್ರಿಯವಾಗಿದೆ 31 ಮಂದಿ ಬಂಧನ ವಿಜಯವಾಡದಲ್ಲಿ ಆಶ್ರಯ ಪಡೆದಿದ್ದ ನಕ್ಸಲರ ಜತೆಗೆ ಸಂಪರ್ಕ ಹೊಂದಿರುವ 31 ಜನರನ್ನು ಪೊಲೀಸರು ಬಂಧಿಸಿದ್ದಾರೆ.  ಆಂಧ್ರಪ್ರದೇಶದ ಎನ್‌ಟಿಆರ್‌ ಕೃಷ್ಣಾ ಕಾಕಿನಾಡ ಮತ್ತು ಎಲೂರು ಜಿಲ್ಲೆಗಲ್ಲೂ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತರಲ್ಲಿ 9 ಮಂದಿ  ಸಿಪಿಐ ಮಾವೊವಾದಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ  ತಿಪ್ಪಿರಿ ತಿರುಪತಿ ಅಲಿಯಾಸ್‌ ದೇವ್‌ಜಿ ಅವರ ಭದ್ರತಾ ಸಿಬ್ಬಂದಿ ಎಂದು ಪೊಲೀಸರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.