
ಹೈದರಾಬಾದ್: ಪೀಪಲ್ಸ್ ಲಿಬರೇಷನ್ ಗೆರಿಲ್ಲಾ ಆರ್ಮಿ(ಪಿಎಲ್‌ಜಿಎ) ಪಡೆಯ ಕಮಾಂಡರ್, ನಕ್ಸಲರ ಹಿರಿಯ ನಾಯಕ ಬರ್ಸೆ ಸುಕ್ಕಾ ಅಲಿಯಾಸ್ ದೇವ ಶಸ್ತ್ರಾಸ್ತ್ರ ತ್ಯಜಿಸಿ ತೆಲಂಗಾಣ ಪೊಲೀಸರ ಮುಂದೆ ಶರಣಾಗಿದ್ದಾರೆ.
ಇದು ತೆಲಂಗಾಣದಲ್ಲಿ ಸಿಪಿಎಂಗೆ (ಮಾವೋವಾದ) ದೊಡ್ಡ ಹಿನ್ನಡೆ ಮತ್ತು ನಕ್ಸಲರ ಪಿಎಲ್‌ಜಿಎ ಭದ್ರಕೋಟೆಯ ಮಹಾ ಪತನ ಎಂದು ಹೇಳಲಾಗುತ್ತಿದೆ. ಬರ್ಸೆ ಸುಕ್ಕಾ ಅವರು ತಮ್ಮ ತಂಡದ 9 ಸದಸ್ಯರೊಂದಿಗೆ ಪೊಲೀಸ್ ಮಹಾ ನಿರ್ದೇಶಕ ಬಿ.ಶಿವಧರ್ ರೆಡ್ಡಿ ಅವರ ಎದುರು ಶರಣಾಗಿದ್ದಾರೆ.
ಛತ್ತೀಸಗಢದ ಸುಕ್ಮಾ, ದಾಂತೆವಾಡ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ಪಿಎಲ್‌ಜಿಎಯನ್ನು ಮಾವೋ ನಾಯಕಿ ಮಾದವಿ ಹಿಡ್ಮಾ ಮುನ್ನಡೆಸುತ್ತಿದ್ದರು. ಈ ಪಡೆ ಶೇ 80ರಷ್ಟು ಶಸ್ತ್ರ ಸಜ್ಜಿತ ಹೋರಾಟಗಾರರನ್ನು ಹೊಂದಿತ್ತು. 49 ವರ್ಷದ ಬರ್ಸೆ ಸುಕ್ಕಾ ಮಾದ್ವಿ ನಂತರ ಎರಡನೇ ಪ್ರಮುಖ ಆದಿವಾಸಿ ನಾಯಕ ಎನಿಸಿದ್ದರು. ಇತ್ತೀಚೆಗಷ್ಟೆ ಮಾದ್ವಿ ಪೊಲೀಸರ ಗುಂಡಿಗೆ ಬಲಿಯಾದ ನಂತರ ಬರ್ಸೆ ನೇತೃತ್ವ ವಹಿಸಿಕೊಂಡಿದ್ದರು. ಮಾದ್ವಿ ಮತ್ತು ಬರ್ಸೆ ಇಬ್ಬರೂ ಪುವ್ವರ್ತಿ ಗ್ರಾಮದಿಂದ ಬಂದವರು.
‘ನಿರ್ದಯ ನಾಯಕ’ ಎಂದೇ ಕರೆಸಿಕೊಂಡಿದ್ದ ಬರ್ಸೆ, ಶಸ್ತ್ರಾಸ್ತ್ರ ತಯಾರಿಕೆ ಮತ್ತು ಸೇನಾ ತಂತ್ರಗಾರಿಕೆಯಲ್ಲಿ ನಿಪುಣರಾಗಿದ್ದರು. 2013ರಲ್ಲಿ ನಡೆದಿದ್ದ ಛತ್ತೀಸಗಢದ ಮಾಜಿ ಸಚಿವ ಮಹೇಂದ್ರ ಕರ್ಮ ಮತ್ತು ಕಾಂಗ್ರೆಸ್‌ನ ಕೆಲ ಮುಖಂಡರ ಹತ್ಯೆಯಲ್ಲಿ ಇವರ ಕೈವಾಡ ಕೇಳಿಬಂದಿತ್ತು.
ಬರ್ಸೆ ಸುಕ್ಕಾ ಅವರ ಶರಣಾಗತಿ ತೆಲಂಗಾಣದಲ್ಲಿ ಪೀಪಲ್ಸ್ ಲಿಬರೇಷನ್ ಗೆರಿಲ್ಲಾ ಆರ್ಮಿ(ಪಿಎಲ್‌ಜಿಎ) ಮತ್ತು ಸಿಪಿಎಂನ ತೆಲಂಗಾಣ ರಾಜ್ಯ ಸಮಿತಿಗೆ ಅವಸಾನದ ಸೂಚನೆ ಎಂದು ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬರ್ಸೆ ದೇವ ಕಾರೆಗುಟ್ಟ ಬೆಟ್ಟದಲ್ಲಿ ಪಿಎಲ್‌ಜಿಎ ಘಟಕವನ್ನು ಮುನ್ನಡೆಸುತ್ತಿದ್ದರು. ತೆಲಂಗಾಣ, ಛತ್ತೀಸಗಢ, ಮಹಾರಾಷ್ಟ್ರ ಮತ್ತು ಎನ್‌ಐಎ ಬರ್ಸೆ ಬಗ್ಗೆ ಮಾಹಿತಿ ಕೊಟ್ಟವರಿಗೆ ₹75 ಲಕ್ಷ ಬಹುಮಾನ ಘೋಷಣೆ ಮಾಡಿದ್ದವು ಎಂದು ತೆಲಂಗಾಣ ನಕ್ಸಲ್ ನಿಗ್ರಹ ಪಡೆ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಬರ್ಸೆ ಸುಕ್ಕಾ, ಕಂಕನಾಲ ರಾಜಿ ರೆಡ್ಡಿ ಅಲಿಯಾಸ್ ವೆಂಕಟೇಶ್ ಸೇರಿದಂತೆ 20 ಮಂದಿ ನಕ್ಸಲರು ತೆಲಂಗಾಣ ಪೊಲೀಸರ ಮುಂದೆ ಶರಣಾಗಿದ್ದಾರೆ. ಇವರ ಬಗ್ಗೆ ಮಾಹಿತಿ ಕೊಟ್ಟವರಿಗೆ ₹ 1.82 ಕೋಟಿ ಬಹುಮಾನ ಘೋಷಿಸಲಾಗಿತ್ತು.
ಶರಣಾದ ನಕ್ಸಲರು ಎ.ಕೆ–47, 10 ಬಂದೂಕುಗಳು, ಗ್ರನೇಡ್, ಏರ್‌ಗನ್ ಸೇರಿದಂತೆ 48 ಶಸ್ತ್ರಾಸ್ತ್ರಗಳು ಮತ್ತು 2,206 ಮದ್ದುಗುಂಡುಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಂಕನಾಲ ರಾಜಿ ರೆಡ್ಡಿ ಅಲಿಯಾಸ್ ವೆಂಕಟೇಶ್ ವಾರಂಗಲ್ ಮತ್ತು ಕರೀಮ್‌ನಗರ ಜಿಲ್ಲೆಗಳಲ್ಲಿ ನಕ್ಸಲ್ ಚಟುವಟಿಕೆ ಮುನ್ನಡೆಸುತ್ತಿದ್ದರು.
ಸದ್ಯ ತೆಲಂಗಾಣದ 17 ಸಕ್ರಿಯ ನಕ್ಸಲರು ದೇಶದ ವಿವಿಧೆಡೆ ಹರಡಿಕೊಂಡಿದ್ದಾರೆ. ಈ ಪಟ್ಟಿಯಲ್ಲಿದ್ದ ಇತರೆ 33 ಮಂದಿ ಈಗಾಗಲೇ ಸಿಪಿಎಂ ತೊರೆದಿರುವ ಮಾಹಿತಿ ಇದೆ ಎಂದು ಡಿಜಿಪಿ ಶಿವಧರ್ ರೆಡ್ಡಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.