ADVERTISEMENT

ತೆಲಂಗಾಣ | ಶರಣಾಗತಿ: ನಕ್ಸಲ್ ನಾಯಕರಲ್ಲೇ ಇಬ್ಭಾಗ?

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 15:42 IST
Last Updated 20 ಸೆಪ್ಟೆಂಬರ್ 2025, 15:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೈದರಾಬಾದ್: ಶಸ್ತ್ರಾಸ್ತ್ರ ತ್ಯಜಿಸಲು ಮತ್ತು ಸರ್ಕಾರದ ಜೊತೆ ಶಾಂತಿ ಮಾತುಕತೆ ನಡೆಸಲು ಸಿದ್ಧವಿರುವುದಾಗಿ ಸಿಪಿಎಂ(ಮಾವೋವಾದಿ) ಪಕ್ಷದ ವಕ್ತಾರ ಮತ್ತು ಉನ್ನತ ನಿರ್ಧಾರಗಳ ಸಮಿತಿ (ಪಾಲಿಟ್‌ಬ್ಯೂರೋ) ಸದಸ್ಯ ಅಭಯ್‌ ಅವರು ಇತ್ತೀಚೆಗೆ ಬರೆದಿರುವ ಪತ್ರ ನಕ್ಸಲ್‌ ನಾಯಕತ್ವದಲ್ಲೇ ಇಬ್ಭಾಗ ಸೃಷ್ಟಿ ಆಗಿರುವುದನ್ನು ತೋರಿಸುತ್ತಿದೆ.

ಕೆಲ ದಿನಗಳ ಹಿಂದೆ ತೆಲಂಗಾಣದಲ್ಲಿ ಅಭಯ್ ಅವರದ್ದು ಎನ್ನಲಾದ ಪತ್ರ ಮತ್ತು ಆಡಿಯೊ ತುಣುಕು ಹರಿದಾಡಿದ್ದವು. ಇವು ಅಸಲಿ ಎಂಬುದು ಕೇಂದ್ರ ಗುಪ್ತಚರ ಇಲಾಖೆಯ ಉನ್ನತ ಮೂಲಗಳಿಂದ ದೃಢಪಟ್ಟಿದೆ. ಆದರೆ ಸಿಪಿಎಂನ ತೆಲಂಗಾಣ ಮಾವೋವಾದಿ ಸಮಿತಿಯು ಅಭಯ್‌ ಅವರ ಘೋಷಣೆಯಿಂದ ಅಂತರ ಕಾಯ್ದುಕೊಂಡಿದೆ. ‘ಇದು ಪಕ್ಷದ ನಿಲುವಲ್ಲ. ಅವರ ವೈಯಕ್ತಿಕ ಅಭಿಪ್ರಾಯ’ ಎಂದಿದೆ. ಶರಣಾಗತಿ ವಿಚಾರ ನಕ್ಸಲ್‌ ನಾಯಕರಲ್ಲಿ ಬಿರುಕು ಸೃಷ್ಟಿಸಿರುವುದಕ್ಕೆ ಇದು ಪುಷ್ಠಿ ನೀಡಿದೆ.

ಸಮಿತಿಯ ವಕ್ತಾರ ಜಗನ್‌ ಅವರು ಹೇಳಿಕೆ ಬಿಡುಗಡೆ ಮಾಡಿ, ಅಭಯ್‌ ನಿಲುವನ್ನು ಟೀಕಿಸಿದ್ದಾರೆ. ‘ಇಂಥಹ ಮಹತ್ವದ ವಿಚಾರವನ್ನು ಬಹಿರಂಗ ಮಾಡುವುದು ಪಕ್ಷದ ನಾಯಕತ್ವ ಮತ್ತು ಕ್ರಾಂತಿಕಾರಿ ಕೆಲಸಗಳಲ್ಲಿ ಗೊಂದಲ ಸೃಷ್ಟಿಸುವ ಯತ್ನ. ಅವರ ಈ ನಡೆ ಚಳವಳಿಗೆ ಸಹಾಯ ಮಾಡುವುದಕ್ಕಿಂತ ಹಾನಿ ಉಂಟು ಮಾಡುತ್ತದೆ’ ಎಂದಿದ್ದಾರೆ.

ADVERTISEMENT

ನಕ್ಸಲ್‌ ಚಳವಳಿಯ ಏಕೈಕ ಹಿರಿಯ ನಾಯಕ ಮಲ್ಲೋಜುಲ ಕೋಟೇಶ್ವರ ರಾವ್‌ ಅವರ ಸೋದರ ವೇಣುಗೋಪಾಲ ರಾವ್‌ ಅವರನ್ನು ಈ ವಿವಾದ ಆವರಿಸಿಕೊಂಡಿದೆ. ವೇಣುಗೋಪಾಲ್ ಅವರು ಅಭಯ್‌ ಮತ್ತು ಸೋನು ಎಂಬ ಹೆಸರುಗಳಲ್ಲಿ ಚಟುವಟಿಕೆ ನಡೆಸುತ್ತಿದ್ದಾರೆ. ಅಲ್ಲದೇ ಪಕ್ಷದ ಕೇಂದ್ರ ಮಂಡಳಿಯ ಸದಸ್ಯರೂ ಆಗಿದ್ದಾರೆ. ಇವರು ಈ ಹಿಂದೆ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆ ಮೇಲೆ ಕಣ್ಣಿಟ್ಟಿದ್ದರು. ಆದರೆ ತಿಪ್ಪಿರಿ ತಿರುಪತಿ ಅವರನ್ನು ಪಕ್ಷ ಆಯ್ಕೆ ಮಾಡಿತ್ತು.

ಆಗಸ್ಟ್ 15ರಂದು ಅಭಯ್‌ ಅವರು ತಮ್ಮ ಭಾವಚಿತ್ರ ಸಮೇತ ಬರೆದಿದ್ದ ಪತ್ರದಲ್ಲಿ ಶಸ್ತ್ರಾಸ್ತ್ರ ಒಪ್ಪಿಸುವ ಬಗ್ಗೆ ಸಾಮಾಜಿಕ ಮಾಧ್ಯಮಗಳ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಎಡಪಂಥೀಯರು, ಕೇಡರ್‌ಗಳು ಮತ್ತು ಭೂಗತವಾಗಿ ಕೆಲಸ ಮಾಡುವವರನ್ನು ಮನವಿ ಮಾಡಿದ್ದರು. ಶಸ್ತ್ರಾಸ್ತ್ರ ಸಂಘರ್ಷ ನಿಲ್ಲಿಸುವ ಸಂಬಂಧ ರಾಜಕೀಯ ಪಕ್ಷಗಳು, ನಕ್ಸಲ್ ಸದಸ್ಯರು, ಸಹಾನುಭೂತಿ ಹೊಂದಿರುವ ವ್ಯಕ್ತಿಗಳ ಸಲಹೆ ಪಡೆಯಲು ಒಂದು ತಿಂಗಳ ಸಮಯಾವಕಾಶ ಕೇಳಿರುವ ಅಂಶ ಪತ್ರದಲ್ಲಿದ್ದವು.

ಈ ಪತ್ರ ವಿಚಾರಕ್ಕೆ ಪ್ರತಿಕ್ರಿಯಿಸಿದ ಜಗನ್‌, ‘ದೇಶದಾದ್ಯಂತ ಬುದ್ಧಿಜೀವಿಗಳು, ಸಂಘಟನೆಗಳು ಮತ್ತು ಖ್ಯಾತನಾಮರು ರಕ್ತಪಾತ ನಿಲ್ಲಿಸಲು ಮನವಿ ಮಾಡಿದ್ದರು. ಬೇರೆ ರಾಜ್ಯಗಳಲ್ಲೂ ಈ ಬಗ್ಗೆ ಸಭೆ ನಡೆದಿದ್ದವು. ಕಗರ್‌ ಸಮರ ಅಂತ್ಯಗೊಳಿಸಲು ಹಲವು ರಾಜಕೀಯ ಪಕ್ಷಗಳು ಒತ್ತಡ ಹಾಕಿದ್ದವು. ಆದರೆ ಬಿಜೆಪಿ ನಾಯಕತ್ವ ನಕ್ಸಲ್ ಮುಕ್ತ ದೇಶ ಅಭಿಯಾನ ಆರಂಭಿಸಿತು. ಹೀಗಾಗಿ ಇದರ ವಿರುದ್ಧ ಹೋರಾಟ ತೀವ್ರಗೊಂಡಿದೆ’ ಎಂದು ತಿಳಿಸಿದ್ದಾರೆ.

‘ಚಳವಳಿಯಿಂದ ಹೊರಬಂದು ಮುಖ್ಯವಾಹಿನಿ ಸೇರಲು ಯಾರೇ ಬಯಸಿದರೂ ಪಕ್ಷದ ಅನುಮತಿ ಬೇಕು. ಜಗತ್ತಿನ ಯಾವುದೇ ಪಕ್ಷ ಅಂತರ್ಜಾಲದ ಮೂಲಕ ಇಂತಹ ಪ್ರಮುಖ ನಿರ್ಧಾರ ಪ್ರಕಟಿಸದು. ಜವಾಬ್ದಾರಿಯುತ ಎಡಪಂಥೀಯ ಮುಖಂಡರು ಈ ದಾರಿ ಹಿಡಿಯುವುದಿಲ್ಲ’ ಎಂದು ಜಗನ್ ಹೇಳಿದರು.

‘ಎಲ್ಲರಿಗೂ ನಮ್ಮ ಮುಂದಿರುವ ಸಮಸ್ಯೆಗಳ ಅರಿವಿದೆ. ಯಾರಿಗೂ ಅನಗತ್ಯ ಹಾನಿ ಬೇಕಿಲ್ಲ. ನಿರ್ದಿಷ್ಟವಾದ ಪರಿಹಾರ ದಿಢೀರನೆ ಸಾಧ್ಯವೂ ಇಲ್ಲ. ಆದರೆ ಸರ್ಕಾರಿ ನೀತಿ ಹೆಸರಿನಲ್ಲಿ ಸಾಮೂಹಿಕ ಹತ್ಯೆ ನಡೆಯುತ್ತಿವೆ. ಕೋಮುವಾದಿ ಬಿಜೆಪಿಯ ಜನ ವಿರೋಧಿ ನಿಲುವಿನ ವಿರುದ್ಧ ಹೋರಾಡುವುದು ನಮ್ಮ ಮುಂದಿರುವ ಗುರಿ’ ಎಂದು ಹೇಳಿದ್ದಾರೆ.

ಕೆಲವು ವರ್ಷಗಳ ಹಿಂದೆ ಪೊಲೀಸರ ಮುಂದೆ ಶರಣಾಗಿದ್ದ ಹಿರಿಯ ನಕ್ಸಲ್‌ ನಾಯಕರೊಬ್ಬರು ಪ್ರತಿಕ್ರಿಯಿಸಿ, ‘ಎಲ್ಲೆಡೆ ಭಿನ್ನ ಅಭಿಪ್ರಾಯಗಳಿರುವುದು ಸಹಜ. ಹರಿದಾಡಿದ್ದ ಧ್ವನಿಯು ಅಭಯ್‌ ಅವರದ್ದೇ. ಈ ಹಿಂದೆ ಅವರೊಂದಿಗೆ ಕೆಲಸ ಮಾಡಿರುವುದರಿಂದ ಆ ಧ್ವನಿಯನ್ನು ಗುರುತಿಸಬಲ್ಲೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.