
ಅಮಿತ್ ಶಾ
ರಾಯಪುರ: ‘ನಕ್ಸಲಿಸಂ ಎಂಬುದು ‘ನಾಗರಹಾವು’ ಇದ್ದಂತೆ. ಅಭಿವೃದ್ಧಿಯ ಹಾದಿಯಲ್ಲಿ ಪದೇ ಪದೇ ಹೆಡೆ ಬಿಚ್ಚಿ ವಿಷಕಾರುತ್ತದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಬಸ್ತಾರ್ ಒಲಿಂಪಿಕ್–2025 ಕ್ರೀಡಾಕೂಟದ ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ‘ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯೊಂದಿಗೆ ಸಂಬಂಧ ಹೊಂದಿರುವವರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಶಾಂತಿ ಮಾತ್ರ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತದೆ’ ಎಂದು ಹೇಳಿದ್ದಾರೆ.
‘2026ರ ಮಾರ್ಚ್ 31ರೊಳಗೆ ದೇಶದಾದ್ಯಂತ ‘ಕೆಂಪು ಭಯೋತ್ಪಾದನೆ’ಯನ್ನು (ನಕ್ಸಲಿಸಂ) ಕೊನೆಗೊಳಿಸುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಕೇಂದ್ರ ಸರ್ಕಾರದ ಸಂಕಲ್ಪವಾಗಿದ್ದು, ಈ ಗುರಿ ತಲುಪಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಶಸ್ತ್ರಾಸ್ತ್ರ ಹಿಡಿದವರಿಗೂ ಅಥವಾ ಭದ್ರತಾ ಸಿಬ್ಬಂದಿಗೂ ಯಾರಿಗೂ ಕೂಡ ಎಡಪಂಥೀಯ ಚಳುವಳಿಯಿಂದ ಯಾವುದೇ ಪ್ರಯೋಜನವಾಗುವುದಿಲ್ಲ’ ಎಂದಿದ್ದಾರೆ.
‘ಏಳು ಜಿಲ್ಲೆಗಳನ್ನು ಒಳಗೊಂಡಿರುವ ಛತ್ತೀಸಗಢದ ನಕ್ಸಲ್ ಪೀಡಿತ ಬಸ್ತಾರ್ ವಿಭಾಗವನ್ನು ಮುಂದಿನ ಐದು ವರ್ಷಗಳಲ್ಲಿ ದೇಶದ ಅತ್ಯಂತ ಅಭಿವೃದ್ಧಿ ಹೊಂದಿದ ಬುಡಕಟ್ಟು ಪ್ರದೇಶವನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ’ ಎಂದೂ ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
ಬಸ್ತಾರ್ ವಿಭಾಗದ ಏಳು ಜಿಲ್ಲೆಗಳಾದ ಕಂಕೇರ್, ಕೊಂಡಗಾಂವ್, ಬಸ್ತಾರ್, ಸುಕ್ಮಾ, ಬಿಜಾಪುರ, ನಾರಾಯಣಪುರ ಮತ್ತು ದಂತೇವಾಡಗಳನ್ನು 2030ರ ಡಿಸೆಂಬರ್ ವೇಳೆಗೆ ದೇಶದ ಅತ್ಯಂತ ಮುಂದುವರಿದ ಬುಡಕಟ್ಟು ಜಿಲ್ಲೆಗಳಾಗಿ ಅಭಿವೃದ್ಧಿಪಡಿಸಲಾಗುವುದು ಎಂದೂ ಶಾ ಹೇಳಿದ್ದಾರೆ.
‘2024ರ ಬಸ್ತಾರ್ ಒಲಿಂಪಿಕ್‌ನಲ್ಲಿ ಭಾಗವಹಿಸಲು ನಾನು ಇಲ್ಲಿಗೆ ಬಂದಿದ್ದೆ. ಮತ್ತೆ ಈ ವರ್ಷವೂ (2025) ಬಂದಿದ್ದೇನೆ. ಹಾಗೆಯೇ 2026ರಲ್ಲಿಯೂ ಬರುತ್ತೇನೆ ಎಂದು ಭರವಸೆ ನೀಡುತ್ತೇನೆ. ಮುಂದಿನ ಬಾರಿ ನಾನು ಇಲ್ಲಿಗೆ ಬರುವಷ್ಟರಲ್ಲಿ ಛತ್ತೀಸಗಢ ಸೇರಿದಂರೆ ಇಡೀ ದೇಶದಾದ್ಯಂತ ನಕ್ಸಲಿಸಂ ಅನ್ನು ಸಂಪೂರ್ಣವಾಗಿ ತೊಡೆದುಹಾಕಿರುತ್ತೇವೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.