ಬಿಜೆಪಿ ಸಂಸದೆ ಹೇಮಾ ಮಾಲಿನಿ ನೇತೃತ್ವದ ಎನ್‌ಡಿಎ ಸಂಸದರ ನಿಯೋಗವು ಕಾಲ್ತುಳಿತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿತ್ತು.
–ಪಿಟಿಐ ಚಿತ್ರ
ಚೆನ್ನೈ: ‘ತಮಿಳುನಾಡಿನ ಕರೂರಿನಲ್ಲಿ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ನಟ ವಿಜಯ್ ಅವರು ಈಚೆಗೆ ನಡೆಸಿದ ರ್‍ಯಾಲಿಯ ವೇಳೆ ಸಂಭವಿಸಿದ್ದ ಕಾಲ್ತುಳಿತ ದುರಂತ ಸಂಶಯಾಸ್ಪದವಾಗಿದೆಯೇ ಹೊರತು ಸ್ವಾಭಾವಿಕವಾಗಿ ನಡೆದಿರುವಂತಹದ್ದಲ್ಲ’ ಎಂದು ಬಿಜೆಪಿ ಸಂಸದೆ ಹೇಮಾ ಮಾಲಿನಿ ತಿಳಿಸಿದ್ದಾರೆ.
ಹೇಮಾ ಮಾಲಿನಿ ನೇತೃತ್ವದ ಎನ್‌ಡಿಎ ಸಂಸದರ ನಿಯೋಗವು ಮಂಗಳವಾರ ತಮಿಳುನಾಡಿನ ಕರೂರು ಜಿಲ್ಲೆಯಲ್ಲಿ ಕಾಲ್ತುಳಿತ ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿತ್ತು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಿರಿದಾದ ಸ್ಥಳದಲ್ಲಿ ರ್‍ಯಾಲಿಯನ್ನು ಆಯೋಜಿಸಲಾಗಿದೆ. ವಿಜಯ್ ಭಾಷಣ ಮಾಡುತ್ತಿದ್ದ ವೇಳೆ ವಿದ್ಯುತ್ ಕಡಿತಗೊಂಡಿದೆ ಎಂದು ಹೇಳಲಾಗುತ್ತಿದೆ. ಇದು ತುಂಬಾ ಭಯಾನಕ ಮತ್ತು ಅತಿದೊಡ್ಡ ಕಾಲ್ತುಳಿತ ದುರಂತವಾಗಿದ್ದು, ದೇಶದ ರಾಜಕೀಯ ಇತಿಹಾಸದಲ್ಲಿ ಇಂತಹ ದುರಂತ ಎಂದಿಗೂ ಸಂಭವಿಸಿರಲಿಲ್ಲ. ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ಇಲ್ಲಿನ ಆಡಳಿತ (ಡಿಎಂಕೆ ಸರ್ಕಾರ) ಸಂಪೂರ್ಣವಾಗಿ ವಿಫಲವಾಗಿದೆ’ ಎಂದು ಹೇಳಿದ್ದಾರೆ.
‘ನಾವು ಕಾಲ್ತುಳಿತ ಸಂಭವಿಸಿದ ಸ್ಥಳಕ್ಕೆ ಹೋಗಿದ್ದೆವು. ತುಂಬಾ ದುಃಖಕರವಾಗಿದೆ. ಇದಕ್ಕೆಲ್ಲ ಕಾರಣ ಯಾರು ಎಂಬುದು ನಮಗೆ ತಿಳಿಯಬೇಕಿದೆ. ಇಂತಹ ಘಟನೆ ಮತ್ತೊಮ್ಮೆ ಸಂಭವಿಸಬಾರದು. ವಿಜಯ್ ಅವರು ಅಷ್ಟೊಂದು ಜನಪ್ರಿಯರಾಗಿದ್ದರೆ, ಇಷ್ಟೊಂದು ಜನರನ್ನು ಆಹ್ವಾನಿಸಬಾರದಿತ್ತು’ ಎಂದು ಅವರು ತಿಳಿಸಿದ್ದಾರೆ.
ಕಾಲ್ತುಳಿತ ದುರಂತಕ್ಕೆ ಕಾರಣವೇನು ಎಂಬುದರ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಂಸದರ ನಿಯೋಗವು, ಘಟನೆಯಲ್ಲಿ ಮೃತಪಟ್ಟವರು ಮತ್ತು ಗಾಯಗೊಂಡವರ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿತ್ತು.
ಸಂಸದರ ನಿಯೋಗದಲ್ಲಿ ಶಿವಸೇನಾ ಸಂಸದ ಶ್ರೀಕಾಂತ್ ಶಿಂದೆ, ಟಿಡಿಪಿ ಸಂಸದ ಮಹೇಶ್ ಕುಮಾರ್ ಸೇರಿದಂತೆ ಬಿಜೆಪಿ ಸಂಸದರಾದ ಹೇಮಾ ಮಾಲಿನಿ, ಅಪರಾಜಿತಾ ಸಾರಂಗಿ, ರೇಖಾ ಶರ್ಮಾ, ಬ್ರಿಜ್‌ಲಾಲ್, ಅನುರಾಗ್ ಠಾಕೂರ್, ತೇಜಸ್ವಿ ಸೂರ್ಯ ಇದ್ದರು.
ಸೆಪ್ಟೆಂಬರ್ 27ರಂದು ಸಂಭವಿಸಿದ್ದ ಕಾಲ್ತುಳಿತ ದುರಂತದಲ್ಲಿ 41 ಮಂದಿ ಮೃತಪಟ್ಟಿದ್ದು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.