ADVERTISEMENT

NDA ಸಭೆ | ಸಶಸ್ತ್ರ ಪಡೆಗಳ ಶೌರ್ಯ, ಮೋದಿ ನಾಯಕತ್ವ ಶ್ಲಾಘಿಸುವ ನಿರ್ಣಯ ಅಂಗೀಕಾರ

ಪಿಟಿಐ
Published 25 ಮೇ 2025, 10:25 IST
Last Updated 25 ಮೇ 2025, 10:25 IST
<div class="paragraphs"><p>ನರೇಂದ್ರ ಮೋದಿ</p></div>

ನರೇಂದ್ರ ಮೋದಿ

   

ಪಿಟಿಐ

ನವದೆಹಲಿ: ಬಿಜೆಪಿ ನೇತೃತ್ವದಲ್ಲಿ ನಡೆದ ಎನ್‌ಡಿಎ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳ ಸಭೆಯಲ್ಲಿ ಸಶಸ್ತ್ರ ಪಡೆಗಳ ಶೌರ್ಯ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಧೈರ್ಯಶಾಲಿ ನಾಯಕತ್ವವನ್ನು ಶ್ಲಾಘಿಸುವ ನಿರ್ಣಯವನ್ನು ಅಂಗೀಕರಿಸಲಾಗಿದೆ.

ADVERTISEMENT

ಶಿವಸೇನಾ ನಾಯಕ, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಸಭೆಯಲ್ಲಿ ನಿರ್ಣಯದ ಕುರಿತು ಪ್ರಸ್ತಾಪಿಸಿದ್ದಾರೆ. ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ನಡೆಸಿದ ‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆಯು ಭಾರತೀಯರ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ ಎಂದು ಅವರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಯಾವಾಗಲೂ ಸಶಸ್ತ್ರ ಪಡೆಗಳನ್ನು ಬೆಂಬಲಿಸುತ್ತಿದ್ದಾರೆ. ‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆಯ ಮೂಲಕ ಉಗ್ರರು ಮತ್ತು ಅವರಿಗೆ ಬೆಂಬಲಿಸುತ್ತಿದ್ದ ನಾಯಕರಿಗೆ ತಕ್ಕ ಉತ್ತರ ನೀಡಿದಂತಾಗಿದೆ ಎಂದು ಎನ್‌ಡಿಎ ನಾಯಕ ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ ಸಿಂಗ್, ಜೆ.ಪಿ.ನಡ್ಡಾ ಸೇರಿದಂತೆ 19 ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟವರಿಗೆ ನಮನ ಸಲ್ಲಿಸಲಾಯಿತು.

ಮೋದಿ ಸರ್ಕಾರದ ಮೂರನೇ ಅವಧಿಯ ಮೊದಲ ವಾರ್ಷಿಕೋತ್ಸವ, ಜಾತಿ ಗಣತಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ.

ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ 'ಆಪರೇಷನ್‌ ಸಿಂಧೂರ' ನಡೆಸುವ ಮೂಲಕ ತಕ್ಕ ಉತ್ತರ ನೀಡಿತ್ತು.

ಭಾರತವು ಪಾಕಿಸ್ತಾನದ ವಿವಿಧ ನಗರಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸುವ ಮೂಲಕ ಪಾಕ್‌ಗೆ ಮತ್ತೊಮ್ಮೆ ತಿರುಗೇಟು ನೀಡಿತ್ತು. ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಪಂಜಾಬ್, ಗುಜರಾತ್‌. ರಾಜಸ್ಥಾನ ಗಡಿ ಪ್ರದೇಶಗಳಲ್ಲಿ ಪಾಕಿಸ್ತಾನದಿಂದ ನಡೆದ ದಾಳಿಗೂ ಭಾರತೀಯ ಸೇನೆ ದಿಟ್ಟ ಪ್ರತಿರೋಧ ಒಡ್ಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.