ADVERTISEMENT

ನಾಯಿ ಕಚ್ಚಿದ್ದ ಎಮ್ಮೆಯ ಹಾಲಿನಿಂದ ‘ರೈತಾ’ ತಯಾರಿ: ಗ್ರಾಮಸ್ಥರಿಗೆ ರೇಬೀಸ್ ಆತಂಕ!

ಪಿಟಿಐ
Published 29 ಡಿಸೆಂಬರ್ 2025, 2:38 IST
Last Updated 29 ಡಿಸೆಂಬರ್ 2025, 2:38 IST
   

ಬುಡೌನ್: ನಾಯಿ ಕಚ್ಚಿದ್ದ ಎಮ್ಮೆಯ ಹಾಲಿನಿಂದ ತಯಾರಿಸಿದ ಮೊಸರಿನ ‘ರೈತಾ’ ಸೇವಿಸಿದ ಪರಿಣಾಮ ಉತ್ತರ ಪ್ರದೇಶದ ಬುಡೌನ್‌ ಜಿಲ್ಲೆಯ ಪಿಪ್ರೌಲಿ ಗ್ರಾಮದ 200 ಜನರಿಗೆ ರೇಬೀಸ್ ಹರಡಿರುವ ಆತಂಕ ಮೂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರೇಬೀಸ್ ವಿರೋಧಿ ಲಸಿಕೆಯನ್ನು ಕೊಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಿಸೆಂಬರ್ 23ರಂದು ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಪುಣ್ಯತಿಥಿ ನಡೆದಿತ್ತು. ಅಲ್ಲಿ ಜನರು ರೈತಾ ಸೇರಿದಂತೆ ಇತರೆ ಖಾದ್ಯಗಳನ್ನು ಸೇವಿಸಿದ್ದರು. ರೈತಾ ತಯಾರಿಸಲು ಹಾಲು ಬಳಸಿದ ಎಮ್ಮೆಯನ್ನು ಕೆಲವು ದಿನಗಳ ಹಿಂದೆ ನಾಯಿ ಕಚ್ಚಿತ್ತು ಎಂದು ತಿಳಿದುಬಂದಿದೆ.

ಡಿಸೆಂಬರ್ 26ರಂದು ಎಮ್ಮೆ ಮೃತಪಟ್ಟಿತ್ತು. ಇದರಿಂದಾಗಿ ರೇಬೀಸ್ ಸೋಂಕು ಹರಡಿರುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆತಂಕಗೊಂಡಿದ್ದರು. ಈ ಕುರಿತು ಮಾಹಿತಿ ಪಡೆದ ತಕ್ಷಣ ಗ್ರಾಮಸ್ಥರಿಗೆ ಲಸಿಕೆ ಹಾಕಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

‘ಗ್ರಾಮದಲ್ಲಿ ಎಮ್ಮೆಯೊಂದು ನಾಯಿ ಕಚ್ಚಿ ರೇಬೀಸ್ ಲಕ್ಷಣಗಳಿಂದ ಸಾವಿಗೀಡಾಗಿದೆ. ಗ್ರಾಮಸ್ಥರು ಸೋಂಕಿತ ಎಮ್ಮೆಯ ಹಾಲಿನಿಂದ ತಯಾರಿಸಿದ ರೈತಾ ಸೇವಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲರಿಗೂ ರೇಬೀಸ್ ಲಸಿಕೆ ಹಾಕಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ’ ಎಂದು ಮುಖ್ಯ ವೈದ್ಯಾಧಿಕಾರಿ ಡಾ. ರಾಮೇಶ್ವರ ಮಿಶ್ರಾ ತಿಳಿಸಿದ್ದಾರೆ.

‘ಹಾಲನ್ನು ಕುದಿಸಿದ ನಂತರ ರೇಬೀಸ್ ಅಪಾಯ ಇರುವುದಿಲ್ಲ. ಆದರೆ, ಯಾವುದೇ ಸಂಭಾವ್ಯ ಅಪಾಯವನ್ನು ತಡೆಗಟ್ಟುವ ಸಲುವಾಗಿ ಎಲ್ಲರಿಗೂ ರೇಬೀಸ್ ವಿರೋಧಿ ಲಸಿಕೆ ನೀಡುತ್ತಿದ್ದೇವೆ. ಜತೆಗೆ, ಯಾವುದೇ ವದಂತಿಗಳನ್ನು ಹರಡದಂತೆ ಗ್ರಾಮದಲ್ಲಿ ಮೇಲ್ವಿಚಾರಣೆ ನಡೆಸಲಾಗುತ್ತಿದೆ’ ಎಂದೂ ಮಿಶ್ರಾ ವಿವರಿಸಿದ್ದಾರೆ.

‘ನಾಯಿ ಕಚ್ಚಿದ್ದರಿಂದ ಎಮ್ಮೆ ಅನಾರೋಗ್ಯಕ್ಕೆ ಒಳಗಾಗಿತ್ತು. ಬಳಿಕ ಅದು ಮೃತಪಟ್ಟಿತ್ತು. ಪುಣ್ಯತಿಥಿ ಸಮಾರಂಭದಲ್ಲಿ ತಯಾರಿಸಿದ್ದ ರೈತಾವನ್ನು ಅದೇ ಎಮ್ಮೆಯ ಹಾಲಿನಿಂದ ತಯಾರಿಸಲಾಗಿತ್ತು. ಇದರಿಂದ ಸೋಂಕಿನ ಭೀತಿ ಕಾಡಲಾರಂಭಿಸಿತು. ಈಗ ರೇಬೀಸ್ ಚುಚ್ಚುಮದ್ದನ್ನು ಪಡೆದಿದ್ದೇವೆ’ ಎಂದು ಗ್ರಾಮಸ್ಥ ಧರ್ಮಪಾಲ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.