ನರೇಂದ್ರ ಮೋದಿ
ಪಿಟಿಐ ಚಿತ್ರ
ನವದೆಹಲಿ: ಹಿಂಸಾತ್ಮಕ ಪ್ರತಿಭಟನೆಗಳಿಂದಾಗಿ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ನೇತೃತ್ವದ ಸರ್ಕಾರ ಪತನಗೊಂಡಿರುವ ಕುರಿತು ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ನೇಪಾಳದಲ್ಲಿ ಸ್ಥಿರತೆ, ಶಾಂತಿ ನೆಲೆಸುವುದು ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ.
ಭದ್ರತೆ ಕುರಿತ ಸಂಪುಟ ಸಮಿತಿ (ಸಿಸಿಎಸ್) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ನೇಪಾಳದಲ್ಲಿ ಕನಿಷ್ಠ 19 ಜನರು ಪ್ರಾಣ ಕಳೆದುಕೊಂಡಿರುವ ಹಿಂಸಾಚಾರವು ಹೃದಯ ವಿದ್ರಾವಕವಾಗಿದೆ. ನೇಪಾಳದಲ್ಲಿ ಶಾಂತಿ ಕಾಪಾಡುವಂತೆ ನನ್ನ ಸಹೋದರ ಸಹೋದರಿಯರಲ್ಲಿ ಮನವಿ ಮಾಡುತ್ತೇನೆ’ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಸೇರಿದಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಭದ್ರತೆ ಕುರಿತ ಸಂಪುಟ ಸಮಿತಿಯ ಸದಸ್ಯರಾಗಿದ್ದಾರೆ.
ದೇಶದಲ್ಲಿ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿದ ಕ್ರಮ ವಿರೋಧಿಸಿ ಹಾಗೂ ಭ್ರಷ್ಟಾಚಾರ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ದೇಶವ್ಯಾಪಿ ನಡೆಯುತ್ತಿರುವ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದ ಬೆನ್ನಲ್ಲೇ ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
‘ಪೊಲೀಸರು ಕೈಗೊಂಡ ಕ್ರಮದಿಂದಾಗಿ ಸೋಮವಾರ 19 ಪ್ರತಿಭಟನಕಾರರು ಮೃತಪಟ್ಟ ಕಾರಣಕ್ಕೆ ಓಲಿ ಅವರು ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿ ಸಾವಿರಾರು ಪ್ರತಿಭಟನಕಾರರು ಅವರ ನಿವಾಸಕ್ಕೆ ನುಗ್ಗಿ, ಘೋಷಣೆಗಳನ್ನೂ ಹಾಕಿದರು. ಇದಾದ ಸ್ವಲ್ಪ ಹೊತ್ತಿನ ಬಳಿಕ ಓಲಿ ಅವರು ತಮ್ಮ ರಾಜೀನಾಮೆ ಘೋಷಿಸಿದ್ದರು.
ಪ್ರಧಾನಿ ಓಲಿ ಅವರು ರಾಜೀನಾಮೆ ನೀಡುವುದಕ್ಕೂ ಮುನ್ನ, ಬಾಲ್ಕೋಟ್‌ನಲ್ಲಿರುವ ಅವರ ಖಾಸಗಿ ನಿವಾಸಕ್ಕೆ ನುಗ್ಗಿದ ಪ್ರತಿಭಟನಕಾರರು, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು.
ನಿಷೇಧಾಜ್ಞೆ ಉಲ್ಲಂಘಿಸಿ, ಭಾರಿ ಭದ್ರತೆ ಏರ್ಪಡಿಸಿದ್ದ ಭದ್ರತಾ ಪಡೆಗಳ ಬೇಲಿಯನ್ನು ಭೇದಿಸಿದ ಪ್ರತಿಭಟನಕಾರರು, ಪ್ರಮುಖ ರಾಜಕಾರಣಿಗಳ ಮನೆಗಳು, ರಾಜಕೀಯ ಪಕ್ಷಗಳ ಕಚೇರಿಗಳು ಸೇರಿ ವಿವಿಧ ಕಟ್ಟಡಗಳಿಗೆ ಬೆಂಕಿ ಹಚ್ಚಿದ್ದರು. ಮಾಜಿ ಪ್ರಧಾನಿ ಪುಷ್ಪ ಕಮಲ್ ದಹಲ್, ಸಂವಹನ ಸಚಿವ ಪೃಥ್ವಿ ಸುಬ್ಬ ಗುರುಂಗ, ಮಾಜಿ ಗೃಹ ಸಚಿವ ರಮೇಶ್ ಲೇಖಕ್ ಅವರ ಮನೆಗಳನ್ನು ಧ್ವಂಸ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.