ನವದೆಹಲಿ: ರೈತರು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವ ಇತರ ಜನರ ಹಕ್ಕುಗಳ ಕುರಿತು ಭಾರತ ಕೂಡ ಸಹಿ ಮಾಡಿರುವ ವಿಶ್ವಸಂಸ್ಥೆಯ ಘೋಷಣೆಯನ್ನು ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳು 'ಉಲ್ಲಂಘಿಸಿವೆʼ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ನಾಯಕ ದರ್ಶನ್ ಪಾಲ್ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಸೋಮವಾರ ಮಾಹಿತಿ ನೀಡಿದ್ದಾರೆ.
ದೆಹಲಿ ಗಡಿಯಲ್ಲಿ ನಡೆಯುತ್ತಿರುವ 110 ನೇ ದಿನದ ಪ್ರತಿಭಟನೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಉದ್ದೇಶಿಸಿ ಜ್ಞಾಪಕ ಪತ್ರವನ್ನು ಸೋಮವಾರ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಇದನ್ನು 'ಖಾಸಗೀಕರಣ ವಿರೋಧಿ, ಕಾರ್ಪೊರೇಟೈಸೇಶನ್ ವಿರೋಧಿ ದಿನ' ಎಂದು ಆಚರಿಸಲಾಯಿತು ಎಂದು ಕೃಷಿ ವಿರೋಧಿ ಕಾನೂನಿನ ವಿರುದ್ಧದ ಪ್ರತಿಭಟನೆಗಳನ್ನು ಮುನ್ನಡೆಸಿರುವ ಎಸ್‌ಕೆಎಂ ಹೇಳಿಕೆಯಲ್ಲಿ ತಿಳಿಸಿದೆ.
ಪಾಲ್, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ 46 ನೇ ಅಧಿವೇಶನವನ್ನು ಉದ್ದೇಶಿಸಿ ವಿಡಿಯೊ ಮೂಲಕ ಮಾತನಾಡಿದರು.
ಇದನ್ನು ಹೊರತುಪಡಿಸಿ, ರೈಲ್ವೆ ನಿಲ್ದಾಣಗಳಲ್ಲಿ ಟ್ರೇಡ್ ಯೂನಿಯನ್ ಕಾರ್ಯಕರ್ತರು ಆಯೋಜಿಸಿದ್ದ ಧರಣಿಗಳಿಂದಲೂ ಮೋದಿಯವರನ್ನು ಉದ್ದೇಶಿಸಿ ಒಂದು ಜ್ಞಾಪಕ ಪತ್ರವನ್ನು ಅಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದು ಅದು ಹೇಳಿದೆ.
ಸಾರ್ವಜನಿಕ ವಲಯದ ಉದ್ಯಮಗಳನ್ನು ಖಾಸಗೀಕರಣಗೊಳಿಸಲು ಮತ್ತು ಭಾರತೀಯ ಕೃಷಿಯನ್ನು ಕಾರ್ಪೊರೇಟ್‌ಗೊಳಿಸುವ ನೀತಿಯನ್ನು ನಿಲ್ಲಿಸಲು ಹಾಗೂ ಡೀಸೆಲ್, ಪೆಟ್ರೋಲ್ ಮತ್ತು ಅಡುಗೆ ಅನಿಲದ ಬೆಲೆಯನ್ನು ತಕ್ಷಣವೇ ಕಡಿಮೆಗೊಳಿಸಬೇಕು ಎಂದು ಜ್ಞಾಪಕ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.