ADVERTISEMENT

ಹೊಸ ಕೃಷಿ ಕಾನೂನುಗಳಿಂದ ರೈತರಿಗೆ ಅನುಕೂಲ: ಪ್ರಧಾನಿ ಮೋದಿ

ಏಜೆನ್ಸೀಸ್
Published 12 ಡಿಸೆಂಬರ್ 2020, 8:00 IST
Last Updated 12 ಡಿಸೆಂಬರ್ 2020, 8:00 IST
ನರೇಂದ್ರ ಮೋದಿ (ಪಿಟಿಐ ಚಿತ್ರ)
ನರೇಂದ್ರ ಮೋದಿ (ಪಿಟಿಐ ಚಿತ್ರ)   

ನವದೆಹಲಿ: ರೈತರಿಗೆ ಅನುಕೂಲವಾಗಲೆಂದೇ ಹೊಸ ಕೃಷಿ ಕಾನೂನುಗಳನ್ನು ರೂಪಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ (ಎಫ್‌ಐಸಿಸಿಐ) ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ‘ಹೊಸ ಸುಧಾರಣೆಗಳು ರೈತರಿಗೆ ಹೊಸ ಮಾರುಕಟ್ಟೆಯನ್ನು ದೊರಕಿಸಿಕೊಡಲಿವೆ. ರೈತರಿಗೆ ತಂತ್ರಜ್ಞಾನ ಲಭ್ಯವಾಗುವಂತೆ ಮಾಡಲಿವೆ. ರೈತರಿಗೆ ನೆರವಾಗುವಂತಹ ಹೂಡಿಕೆಗಳನ್ನು ಕೃಷಿ ಕ್ಷೇತ್ರಕ್ಕೆ ಸೆಳೆಯಲಿದೆ’ ಎಂದು ಹೇಳಿದ್ದಾರೆ.

‘ಕೃಷಿ ಮತ್ತು ಇತರ ಕ್ಷೇತ್ರಗಳ ನಡುವೆ ಅಡ್ಡಗೋಡೆ ಇರುವುದನ್ನು ಗಮನಿಸಿದ್ದೆವು. ಅದು ಕೃಷಿ ಮೂಲಸೌಕರ್ಯ, ಆಹಾರ ಸಂಸ್ಕರಣೆ, ಸಂಗ್ರಹಾಗಾರ ಅಥವಾ ಶೀಥಲೀಕರಣ ಯಾವುದರ ನಡುವೆಯೇ ಇರಬಹುದು. ಎಲ್ಲ ಅಡೆತಡೆಗಳನ್ನು ಈಗ ತೆರವುಗೊಳಿಸಲಾಗಿದೆ’ ಎಂದು ಮೋದಿ ಹೇಳಿದ್ದಾರೆ.

ನೂತನ ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿರುವ ಮಧ್ಯೆಯೇ ಪ್ರಧಾನಿಯವರಿಂದ ಈ ಹೇಳಿಕೆ ಮೂಡಿಬಂದಿದೆ. ಹೊಸ ಕಾಯ್ದೆಗಳಿಂದ ಕನಿಷ್ಠ ಬೆಂಬಲ ಬೆಲೆ ರದ್ದಾಗಲಿದೆ, ಆದಾಯಕ್ಕೆ ಹೊಡೆತ ಬೀಳಲಿದೆ ಎಂದು ರೈತರು ಆರೋಪಿಸುತ್ತಿದ್ದಾರೆ. ಆದರೆ, ಕನಿಷ್ಠ ಬೆಂಬಲ ಬೆಲೆ ಮುಂದುವರಿಯಲಿದೆ ಎಂದು ಸರ್ಕಾರ ಹೇಳುತ್ತಿದೆ.

ಈ ಮಧ್ಯೆ, ದೆಹಲಿ ಗಡಿ ಪ್ರದೇಶಗಳಲ್ಲಿ ರೈತರ ಪ್ರತಿಭಟನೆ ತೀವ್ರಗೊಂಡಿದೆ. ರೈತ ಸಂಘಟನೆಗಳು ಜೈಪುರ್ – ದೆಹಲಿ ಮತ್ತು ದೆಹಲಿ –ಆಗ್ರಾ ಎಸ್‌ಪ್ರೆಸ್‌ವೇಗಳನ್ನು ಬಂದ್ ಮಾಡುವುದಾಗಿ ಎಚ್ಚರಿಸಿರುವ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.