ADVERTISEMENT

ನೂತನ ಕಾಯ್ದೆಯಂತೆ ಹೊಸ ಸಿಇಸಿ ನೇಮಕ: ಸುಪ್ರೀಂ ಕೋರ್ಟ್‌ನತ್ತ ಎಲ್ಲರ ಚಿತ್ತ

ಪಿಟಿಐ
Published 11 ಜನವರಿ 2025, 13:38 IST
Last Updated 11 ಜನವರಿ 2025, 13:38 IST
<div class="paragraphs"><p>ಸುಪ್ರೀಂ ಕೋರ್ಟ್‌</p></div>

ಸುಪ್ರೀಂ ಕೋರ್ಟ್‌

   

ನವದೆಹಲಿ: ಕೇಂದ್ರ ಸರ್ಕಾರ 2023ರ ಡಿಸೆಂಬರ್‌ನಲ್ಲಿ ಜಾರಿಗೊಳಿಸಿರುವ ನೂತನ ಕಾಯ್ದೆ ಪ್ರಕಾರವೇ ನೂತನ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಸೇರಿದಂತೆ ಆಯೋಗದ ಇತರ ಆಯುಕ್ತರ ನೇಮಕವಾಗಲಿದೆ.

ಹಾಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್ ಅವರಿಗೆ ಫೆಬ್ರುವರಿ 18ರಂದು 65 ವರ್ಷ ತುಂಬಲಿರುವ ಕಾರಣ, ಅಂದು ಅವರು ನಿವೃತ್ತಿ ಹೊಂದುವರು. ಈ ಕಾರಣಕ್ಕೆ, ನೂತನ ಸಿಇಸಿ ನೇಮಕವು ಹೊಸ ಕಾಯ್ದೆ ಪ್ರಕಾರವೇ ನಡೆಯಲಿದೆ.

ADVERTISEMENT

ಆದರೆ, ಆಯೋಗದ ಆಯುಕ್ತರನ್ನು ನೇಮಕ ಮಾಡುವುದಕ್ಕಾಗಿ ಜಾರಿಗೊಳಿಸಿರುವ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಫೆ.4ರಂದು ನಡೆಸಲಿದೆ. ಹೀಗಾಗಿ, ಸುಪ್ರೀಂ ಕೋರ್ಟ್‌ ಪ್ರಕಟಿಸುವ ನಿರ್ಧಾರದತ್ತ ಈಗ ಎಲ್ಲರ ದೃಷ್ಟಿ ನೆಟ್ಟಿದೆ.

ಸಿಇಸಿ ಹಾಗೂ ಚುನಾವಣಾ ಆಯುಕ್ತರ ನೇಮಕಕ್ಕೆ ಸಂಬಂಧಿಸಿ ಈ ಮೊದಲು ಜಾರಿಯಲ್ಲಿದ್ದ ಸಮಿತಿಯ ಸದಸ್ಯರ ಪೈಕಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಕೂಡ ಒಬ್ಬರಾಗಿರುತ್ತಿದ್ದರು. ನೂತನ ಕಾಯ್ದೆ ಪ್ರಕಾರ, ಸಿಜೆಐ ಅವರು ಸಮಿತಿ ಸದಸ್ಯರಲ್ಲ. ಈ ಕಾರಣಕ್ಕೆ, ನೂತನ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ.

ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ನಿಬಂಧನೆಗಳು ಮತ್ತು ಅಧಿಕಾರ ವ್ಯಾಪ್ತಿ) ಕಾಯ್ದೆಯು 2023ರ ಡಿಸೆಂಬರ್‌ನಲ್ಲಿ ಜಾರಿಗೆ ಬಂದಿದೆ.

ನೂತನ ಕಾಯ್ದೆಯಂತೆ, ಪ್ರಧಾನಿ ನೇತೃತ್ವದ ಸಮಿತಿ ಆಯುಕ್ತರ ನೇಮಕ ಮಾಡಲಿದೆ. ‌ಪ್ರಧಾನಿ ಸೂಚಿಸುವ ಕೇಂದ್ರ ಸಚಿವರೊಬ್ಬರು ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ಈ ಸಮಿತಿಯಲ್ಲಿ ಇರಲಿದ್ದಾರೆ.

ನೂತನ ಸಿಇಸಿ ಅಥವಾ ಚುನಾವಣಾ ಆಯುಕ್ತರ ನೇಮಕಕ್ಕೆ ಸಂಬಂಧಿಸಿ ಹೆಸರನ್ನು ಈ ಸಮಿತಿ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡುವುದು.

ನೂತನ ಕಾಯ್ದೆ ಜಾರಿಗೆ ಬಂದ ನಂತರ ಜ್ಞಾನೇಶ ಕುಮಾರ್‌ ಹಾಗೂ ಎಸ್‌.ಎಸ್‌.ಸಂಧು ಅವರನ್ನು ಚುನಾವಣಾ ಆಯುಕ್ತರನ್ನಾಗಿ 2024ರ ಮಾರ್ಚ್‌ನಲ್ಲಿ ನೇಮಕ ಮಾಡಲಾಗಿದೆ. ಆಗ ಆಯುಕ್ತರಾಗಿದ್ದ ಅರುಣ್‌ ಗೋಯಲ್ ಅವರ ರಾಜೀನಾಮೆ ಹಾಗೂ ಅನೂಪ್‌ ಚಂದ್ರ ಪಾಂಡೆ ಅವರ ನಿವೃತ್ತಿಯಿಂದಾಗಿ ಈ ಸ್ಥಾನಗಳು ತೆರವಾಗಿದ್ದವು.

ಜ್ಞಾನೇಶ ಕುಮಾರ್‌ ಅವರ ಅಧಿಕಾರಾವಧಿ 2029ರ ಜನವರಿ 26ರ ವರೆಗೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.