ADVERTISEMENT

RSS ಮುಖಂಡ ಶ್ರೀನಿವಾಸನ್ ಹತ್ಯೆ ಪ್ರಕರಣ: PFI ಸದಸ್ಯನ ಬಂಧಿಸಿದ NIA

ಏಜೆನ್ಸೀಸ್
Published 19 ಮಾರ್ಚ್ 2024, 13:10 IST
Last Updated 19 ಮಾರ್ಚ್ 2024, 13:10 IST
ಎನ್‌ಐಎ (ಸಂಗ್ರಹ ಚಿತ್ರ)
ಎನ್‌ಐಎ (ಸಂಗ್ರಹ ಚಿತ್ರ)   

ನವದೆಹಲಿ: ಕೇರಳದಲ್ಲಿ 2022ರಲ್ಲಿ ನಡೆದಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌)ನ ಮುಖಂಡ ಶ್ರೀನಿವಾಸನ್ ಕೊಲೆ ನಂತರ ತಲೆಮರೆಸಿಕೊಂಡಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಸದಸ್ಯನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.

ಶಫೀಖ್ ಬಂಧಿತ ಆರೋಪಿ. ಈತನನ್ನು ಎನ್‌ಐಎ ಅಧಿಕಾರಿಗಳು ಕೊಲ್ಲಂ ಜಿಲ್ಲೆಯಲ್ಲಿ ಸೋಮವಾರ ವಶಕ್ಕೆ ಪಡೆದಿದ್ದರು. ಈತನ ಬಂಧನಕ್ಕೆ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳೂ ಬಲೆ ಬೀಸಿದ್ದರು. 2022ರ ಏ. 16ರಂದು ಪಾಲಕ್ಕಾಡ್‌ನಲ್ಲಿ ಶ್ರೀನಿವಾಸನ್ ಕೊಲೆಯ ನಂತರ ಈತ ನಾಪತ್ತೆಯಾಗಿದ್ದ.

ಮಲಪ್ಪುರಂ ಜಿಲ್ಲೆಯ ನಿವಾಸಿಯಾದ ಶಫೀಕ್‌, ಪಿಎಫ್‌ಐ ಸಂಘಟನೆಯ ಭಾಗವಾಗಿದ್ದ. ಕೃತ್ಯಕ್ಕೆ ಸಂಬಂಧಿಸಿದಂತೆ ಪಿಎಫ್‌ಐ ನಾಯಕರ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿದ್ದ ಅಶ್ರಫ್‌ಗೆ ಶಫೀಕ್ ಆಶ್ರಯ ನೀಡಿದ್ದ ಎಂದು ಎನ್‌ಐಎ ಹೇಳಿದೆ.

ADVERTISEMENT

ಈ ಕೊಲೆ ಸಂಚಿನಲ್ಲಿ ಒಟ್ಟು 71 ಜನರು ಭಾಗಿಯಾಗಿದ್ದಾರೆ ಎಂದು ಎನ್‌ಐಎ ಹೇಳಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 2023ರ ಮಾರ್ಚ್‌ 17ರಂದು ಹಾಗೂ ನವೆಂಬರ್ 6ರಂದು ಎರಡು ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.

ಆರೋಪಿಗಳಲ್ಲಿ ಒಬ್ಬನಾದ ಅಬ್ದುಲ್ ನಾಸೀರ್ ಜ. 2ರಂದು ಮೃತಪಟ್ಟಿದ್ದಾನೆ. ಸಾಹೀರ್ ಕೆ.ವಿ. ಹಾಗೂ ಜಾಫರ್‌ ಭೀಮಂತ್ವಿಡಾ ಎಂಬಿಬ್ಬರನ್ನು ಕ್ರಮವಾಗಿ 2023ರ ಅ. 19 ಹಾಗೂ ಫೆ. 12ರಂದು ಎನ್‌ಐಎ ಬಂಧಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.