ADVERTISEMENT

ಲಾರೆನ್ಸ್ ಬಿಷ್ಣೋಯಿ, ಗೋಲ್ಡಿ ಬ್ರಾರ್ ಸೇರಿದಂತೆ 12 ಮಂದಿ ವಿರುದ್ಧ ಚಾರ್ಜ್‌ಶೀಟ್

ಪಿಟಿಐ
Published 24 ಮಾರ್ಚ್ 2023, 13:53 IST
Last Updated 24 ಮಾರ್ಚ್ 2023, 13:53 IST
ಎನ್ಐಎ
ಎನ್ಐಎ   

ನವದೆಹಲಿ: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯ ಆರೋಪದಲ್ಲಿ ಬಂಧಿತವಾಗಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ, ಗೋಲ್ಡಿ ಬ್ರಾರ್ ಮತ್ತು ಇತರ 12 ಮಂದಿಯ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) ಶುಕ್ರವಾರ ಹೊಸದಾಗಿ ಚಾರ್ಜ್‌ಶೀಟ್‌ ಸಲ್ಲಿಸಿದೆ.

ಗಣ್ಯ ವ್ಯಕ್ತಿಗಳನ್ನು ಹತ್ಯೆ ಮಾಡಲು ಒಳಸಂಚು ಹಾಗೂ ನಿಷೇಧಿತ ಉಗ್ರ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ (ಬಿಕೆಐ) ಮತ್ತು ಖಾಲಿಸ್ತಾನ ಪರ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಿ ಲಾರೆನ್ಸ್ ಮತ್ತು ಆತನ ಸಹಚರರ ವಿರುದ್ಧದ ಚಾರ್ಜ್‌ಶೀಟ್ ‌‌ದಾಖಲಿಸಲಾಗಿದೆ.

ಈ ಎಲ್ಲಾ 14 ಆರೋಪಿಗಳು ಪ್ರಸಿದ್ಧ ಚಲನಚಿತ್ರ ತಾರೆಯರು, ಗಾಯಕರು, ಉದ್ಯಮಿಗಳು, ಧಾರ್ಮಿಕ ಮುಖಂಡರು ಹಾಗೂ ಸಾಮಾಜಿಕ ಕಾರ್ಯಕರ್ತರನ್ನು ಹತ್ಯೆ ಮಾಡಲು ಕ್ರಿಮಿನಲ್ ಪಿತೂರಿ ಮಾಡಿದ್ದರು. ಈ ಮೂಲಕ ದೇಶದಲ್ಲಿ ಭಯೋತ್ಪಾದನೆಯ ಜಾಲವನ್ನು ಹರಡುವ ಉದ್ದೇಶವನ್ನೂ ಅರೋಪಿಗಳು ಹೊಂದಿದ್ದರು ಎಂದು ಎನ್ಐಎ ಆರೋಪಿಸಿದೆ.

ADVERTISEMENT

ಆರೋಪಿಗಳು ಪಾಕಿಸ್ತಾನದ ಸಂಚುಕೋರರೊಂದಿಗೆ ಸಂಪರ್ಕ ಹೊಂದಿದ್ದಲ್ಲದೇ, ಕೆನಡಾ, ನೇಪಾಳ ಮತ್ತು ಇತರ ದೇಶಗಳಲ್ಲಿ ನೆಲೆಸಿರುವ ಖಾಲಿಸ್ತಾನ ಪರ ಸಂಘನೆಗಳೊಂದಿಗೂ ಸಂಪರ್ಕ ಹೊಂದಿದ್ದರು ಎಂದೂ ಸಂಸ್ಥೆಯು ಹೇಳಿದೆ.

ಮೂಸೆವಾಲಾ ಹತ್ಯೆ ಪ್ರಕರಣದ ಮುಖ್ಯ ಆರೋಪಿಗಳಲ್ಲಿ ಒಬ್ಬನಾಗಿರುವ ಬಿಷ್ಣೋಯಿ 2015ರಲ್ಲಿ ಬಂಧಿತನಾದ ಬಳಿಕ ಜೈಲಿನಲ್ಲಿಯೇ ಇದ್ದಾನೆ. ಕೆನಡಾ ಮೂಲದ ಗೋಲ್ಡಿ ಬ್ರಾರ್ ಜತೆಗೂಡಿ ವಿವಿಧ ರಾಜ್ಯಗಳಲ್ಲಿರುವ ಕೈದಿಗಳ ಜತೆಗೆ ಭಯೋತ್ಪಾದನೆ ಮತ್ತು ಅಪರಾಧ ಜಾಲದ ಸಂಪರ್ಕವನ್ನು ಹೊಂದಿದ್ದಾನೆ. ಗೋಲ್ಡಿ ಬ್ರಾರ್ 2022ರ ನವೆಂಬರ್‌ನಲ್ಲಿ ಡೇರಾ ಸಚ್ಚಾ ಸೌಧ ಅವರ ಅನುಯಾಯಿ ಪ್ರದೀಪ್ ಕುಮಾರ್ ಅವರ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.