ADVERTISEMENT

ನೀತಿ ಆಯೋಗದ ಆರೋಗ್ಯ ಸೂಚ್ಯಂಕ: ಕೇರಳ ಪ್ರಥಮ, ಉತ್ತರ ಪ್ರದೇಶಕ್ಕೆ ಕೊನೆಯ ಸ್ಥಾನ

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 14:01 IST
Last Updated 25 ಜೂನ್ 2019, 14:01 IST
   

ನವದೆಹಲಿ: ನೀತಿ ಆಯೋಗವು ‘ಆರೋಗ್ಯ ಸೂಚ್ಯಂಕ’ ವರದಿಯನ್ನು ಮಂಗಳವಾರ ಬಿಡುಗಡೆ ಮಾಡಿದ್ದು, ಕೇರಳ ಪ್ರಥಮ ಹಾಗೂ ಉತ್ತರ ಪ್ರದೇಶ ಕೊನೆಯ ಸ್ಥಾನದಲ್ಲಿದೆ.

ಆಂಧ್ರ ಪ್ರದೇಶ ಎರಡನೇ ಮತ್ತು ಮಹಾರಾಷ್ಟ್ರ ಮೂರನೇ ಸ್ಥಾನದಲ್ಲಿದೆ. ಅದೇ ವೇಳೆ ಬಿಹಾರ ಮತ್ತು ಉತ್ತರ ಪ್ರದೇಶ ಕೊನೆಯ ಸ್ಥಾನದಲ್ಲಿದೆ.

ಯಾವೆಲ್ಲಾ ರಾಜ್ಯಗಳಲ್ಲಿ ಆರೋಗ್ಯ ಸೌಲಭ್ಯ ವ್ಯವಸ್ಥೆಯ ಗುಣಮಟ್ಟ ಹೇಗಿದೆ ಎನ್ನುವುದನ್ನು ಈ ವರದಿ ತಿಳಿಸುತ್ತದೆ. ‘ಸ್ವಸ್ಥ ರಾಜ್ಯಗಳು, ಪ್ರಗತಿಪರ ಭಾರತ’ ವರದಿಯಲ್ಲಿ ದೊಡ್ಡ ರಾಜ್ಯಗಳು, ಸಣ್ಣ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಎಂದು ಮೂರು ವರ್ಗಗಳ ಅಡಿಯಲ್ಲಿ ರಾಜ್ಯಗಳಿಗೆ ಶ್ರೇಣಿ ನೀಡಲಾಗಿದೆ.‌

ADVERTISEMENT

ಸಣ್ಣ ರಾಜ್ಯಗಳಲ್ಲಿ ಮಿಜೋರಾಂ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಚಂಡೀಗಢ ಮೊದಲ ಸ್ಥಾನದಲ್ಲಿವೆ.

ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸೂಚ್ಯಂಕ ಶ್ರೇಣಿ ಹಾಗೂ ಆರ್ಥಿಕ ಅಭಿವೃದ್ಧಿ ಮಟ್ಟದ ನಡುವೆ ಗುಣಾತ್ಮಕ ಸಂಬಂಧವಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದು ಎರಡನೇ ಸುತ್ತಿನ ವರದಿಯಾಗಿದ್ದು, ಫೆಬ್ರುವರಿಯಲ್ಲಿ ಮೊದಲ ಸುತ್ತಿನ ವರದಿ ಬಿಡುಗಡೆ ಮಾಡಲಾಗಿತ್ತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಯೋಗದಲ್ಲಿ ಈ ವರದಿ ಸಿದ್ಧಪಡಿಸಲಾಗಿದೆ. ವಿಶ್ವ ಬ್ಯಾಂಕ್ ಇದಕ್ಕೆ ತಾಂತ್ರಿಕ ನೆರವು ಒದಗಿಸಿತ್ತು.

ರಾಜ್ಯಗಳು ಉತ್ತಮ ಆರೋಗ್ಯ ಸೌಲಭ್ಯಗಳನ್ನು ಹೊಂದಲು ಪ್ರೋತ್ಸಾಹಿಸುವ ಉದ್ದೇಶದಿಂದ ವಾರ್ಷಿಕ ಆರೋಗ್ಯ ಸೂಚ್ಯಂಕ ವರದಿ ಬಿಡುಗಡೆ ಮಾಡಲು ನೀತಿ ಆಯೋಗ ಬದ್ಧವಾಗಿದೆ ಎಂದು ಉಪಾಧ್ಯಕ್ಷ ರಾಜೀವ್ ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.