
ಪ್ರಶಾಂತ್ ಕಿಶೋರ್
(ಪಿಟಿಐ ಚಿತ್ರ)
ಬೆತಿಯಾ: 'ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಹೊಸ ಸಂಪುಟವು ಭ್ರಷ್ಟರು, ಕ್ರಿಮಿನಲ್ ನಾಯಕರಿಂದಲೇ ತುಂಬಿಕೊಂಡಿದೆ' ಎಂದು ಜನ ಸುರಾಜ್ ಪಕ್ಷದ ನಾಯಕ ಪ್ರಶಾಂತ್ ಕಿಶೋರ್ ಆರೋಪಿಸಿದ್ದಾರೆ.
ಬಿಹಾರದಲ್ಲಿ ನೂತನ ಸರ್ಕಾರದ ಪ್ರಮಾಣವಚನ ಕಾರ್ಯಕ್ರಮದ ವೇಳೆ ಪಶ್ಚಿಮ ಚಂಪಾರಣ್ಯ ಗಾಂಧಿ ಆಶ್ರಮದಲ್ಲಿ ಪ್ರಶಾಂತ್ ಕಿಶೋರ್ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದ್ದರು.
'ಪಕ್ಷವು ಹೊಸ ವರ್ಷದಲ್ಲಿ 'ಬಿಹಾರ ನವ ನಿರ್ಮಾಣ ಸಂಕಲ್ಪ ಯಾತ್ರೆ'ಯನ್ನು ಕೈಗೊಳ್ಳಲಿದೆ. ಯಾತ್ರೆಯು ಜನವರಿ 15ರಂದು ಆರಂಭವಾಗಲಿದೆ. ಈ ಸಂದರ್ಭದಲ್ಲಿ ಮನೆ ಮನೆಗಳಿಗೆ ಭೇಟಿ ನೀಡಿ ಸರ್ಕಾರದ ಜನ ವಿರೋಧಿ ನೀತಿ ಬಗ್ಗೆ ಜಾಗೃತಿ ಮೂಡಿಸಲಿದ್ದೇವೆ' ಎಂದು ಹೇಳಿದ್ದಾರೆ.
'ಬಿಹಾರ ಸರ್ಕಾರವು ಭ್ರಷ್ಟರು, ಅಪರಾಧಿಗಳಿಂದ ತುಂಬಿಕೊಂಡಿದೆ. ಇದು ಜನರಿಗೆ ಕಪಾಳ ಮೋಕ್ಷ ಮಾಡಿದಂತಾಗಿದೆ. ಗಾಯದ ಮೇಲೆ ಉಪ್ಪು ಸವರಿದಂತಾಗಿದೆ' ಪ್ರಶಾಂತ್ ಟೀಕಿಸಿದ್ದಾರೆ.
'ಸಂಪುಟಕ್ಕೆ ಸೇರಿಸಿದ ನಾಯಕರನ್ನು ನೋಡಿದರೆ ಬಿಹಾರದ ಬಗ್ಗೆ ಪ್ರಧಾನಿ, ಗೃಹ ಸಚಿವರು ಹಾಗೂ ಸಿಎಂ ನಿತೀಶ್‌ಗೆ ಕಿಂಚಿತ್ತು ಕಾಳಜಿ ಇಲ್ಲ' ಎಂದು ಆರೋಪಿಸಿದ್ದಾರೆ.
'ಒಂದು ಕೋಟಿಗೂ ಅಧಿಕ ಮಹಿಳೆಯರಿಗೆ ₹10 ಸಾವಿರ ವರ್ಗಾಯಿಸುವ ಮೂಲಕ ಮತವನ್ನು ಖರೀದಿಸಲಾಗಿದೆ. ನಾನು ಏನಾದರೂ ಸುಳ್ಳು ಹೇಳುತ್ತಿದ್ದರೆ ಸರ್ಕಾರವು ನನ್ನನ್ನು ಜೈಲಿಗೆ ತಳ್ಳಬಹುದು' ಎಂದು ಸವಾಲು ಹಾಕಿದ್ದಾರೆ.
'ರಾಜ್ಯದ ತುರ್ತು ನಿಧಿ ಹಾಗೂ ಸರ್ಕಾರದ ಯೋಜನೆಗಾಗಿ ಮೀಸಲಿರಿಸಿದ್ದ ಹಣವನ್ನು ವರ್ಗಾಯಿಸಲಾಗಿದೆ' ಎಂದು ಪ್ರಶಾಂತ್ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.