ADVERTISEMENT

ಜೋಡೊ ಉತ್ಸಾಹ ಕುಗ್ಗದಂತೆ ನೋಡಿಕೊಳ್ಳಿ: ನಿತೀಶ್

ಪಿಟಿಐ
Published 18 ಫೆಬ್ರುವರಿ 2023, 15:45 IST
Last Updated 18 ಫೆಬ್ರುವರಿ 2023, 15:45 IST
ನಿತೀಶ್ ಕುಮಾರ್
ನಿತೀಶ್ ಕುಮಾರ್   

ಪಟ್ನಾ: ‘ಕಾಂಗ್ರೆಸ್ ಪಕ್ಷವು ವಿರಮಿಸಬಾರದು. ಪಕ್ಷದ ಮುಖಂಡ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ‘ಭಾರತ್ ಜೋಡೊ’ ಯಾತ್ರೆಯ ಉತ್ಸಾಹವನ್ನು ಉಳಿಸಿಕೊಂಡು ಮುನ್ನಡೆಯಬೇಕು’ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಶನಿವಾರ ಕಾಂಗ್ರೆಸ್‌ಗೆ ಸಲಹೆ ನೀಡಿದ್ದಾರೆ.

ಸಿಪಿಐ(ಎಂಎಲ್) ಲಿಬರೇಷನ್‌ನ ಮಹಾಅಧಿವೇಶನದ ಅಂಗವಾಗಿ ಆಯೋಜಿಸಿದ್ದ ‘ಪ್ರಜಾಪ್ರಭುತ್ವ– ಸಂವಿಧಾನ ಉಳಿಸಿ, ಫ್ಯಾಸಿಸಂ ತೊಲಗಿಸಿ’ ಕುರಿತ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಆದಷ್ಟು ಬೇಗ ಒಗ್ಗೂಡಿ, ಲೋಕಸಭೆಯಲ್ಲಿ 300ಕ್ಕೂ ಅಧಿಕ ಸಂಖ್ಯಾಬಲ ಹೊಂದಿರುವ ಬಿಜೆಪಿಯನ್ನು ಮುಂಬರುವ ಚುನಾವಣೆಯಲ್ಲಿ 100 ಸಂಖ್ಯಾಬಲಕ್ಕೆ ತರಲು ಕಾರ್ಯಪ್ರವೃತ್ತವಾಗಬೇಕು’ ಎಂದೂ ಹೇಳಿದ್ದಾರೆ.

‘ಭಾರತ್ ಜೋಡೊ ಯಾತ್ರೆಯು ತುಂಬಾ ಚೆನ್ನಾಗಿ ನಡೆದಿದೆ ಎಂದು ಕಾಂಗ್ರೆಸ್ಸಿನಲ್ಲಿರುವ ನನ್ನ ಸ್ನೇಹಿತರಿಗೆ ಹೇಳಬಯಸುತ್ತೇನೆ. ಆದರೆ, ಅವರು ಇಲ್ಲಿಗೇ ನಿಲ್ಲಬಾರದು’ ಎಂದು ಪಕ್ಕದಲ್ಲಿದ್ದ ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರತ್ತ ತಿರುಗಿ ನೋಡಿ ಹೇಳಿದರು.

ADVERTISEMENT

ತಮ್ಮದೇ ಶೈಲಿಯಲ್ಲಿ ಬಿಜೆಪಿ ಮತ್ತು ಅದರ ನಾಯಕರ ಹೆಸರನ್ನು ಉಲ್ಲೇಖಿಸದೇ ನಿತೀಶ್ ಕುಮಾರ್, ‘ಲೋಕಸಭೆ ಚುನಾವಣೆಯು ಈ ಜನರಿಂದ ವಿಮೋಚನೆ ಪಡೆಯಲು ಒಂದು ಅವಕಾಶವಾಗಿದೆ’ ಎಂದು ಹೇಳಿದರು.

ದೇಶದಲ್ಲಿ ಹೆಚ್ಚುತ್ತಿರುವ ಕೋಮುಗಲಭೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ‘ವಿಭಜನೆಯ ಹೊರತಾಗಿಯೂ ಹಿಂದೂಗಳು ಮತ್ತು ಮುಸ್ಲಿಮರು ಶಾಂತಿಯಿಂದ ಬದುಕಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.