ADVERTISEMENT

ಹೊಸ ಕಾನೂನು ಅಳವಡಿಸಿಕೊಳ್ಳದ ಎನ್‌ಬಿಎ ವಿರುದ್ಧ ಕ್ರಮ ಬೇಡ: ಕೇರಳ ಹೈಕೋರ್ಟ್‌

ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳ ಕುರಿತ ಅರ್ಜಿ ವಿಚಾರಣೆ; ಕೇಂದ್ರಕ್ಕೆ ಸೂಚನೆ

ಪಿಟಿಐ
Published 9 ಜುಲೈ 2021, 9:35 IST
Last Updated 9 ಜುಲೈ 2021, 9:35 IST
   

ಕೊಚ್ಚಿ: ಹೊಸ ಮಾಹಿತಿ ತಂತ್ರಜ್ಞಾನ ಕಾನೂನುಗಳನ್ನು ಅಳವಡಿಸಿಕೊಳ್ಳದ ಸುದ್ದಿ ಪ್ರಸಾರಕ ಸಂಘಟನೆಗಳ (ಎನ್‌ಬಿಎ) ಸದಸ್ಯರ ವಿರುದ್ಧ ಯಾವುದೇ ರೀತಿಯ ಕಠಿಣ ಕ್ರಮಗಳನ್ನು ಕೈಗೊಳ್ಳದಂತೆ ಕೇರಳ ಹೈಕೋರ್ಟ್‌ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿ ಪಿ.ಬಿ. ಸುರೇಶ್‌ ಕುಮಾರ್‌ ಅವರು ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಸಹ ಜಾರಿಗೊಳಿಸಿದ್ದಾರೆ.

‘ಹೊಸ ಮಾಹಿತಿ ತಂತ್ರಜ್ಞಾನ ಕಾನೂನುಗಳು ಸರ್ಕಾರಿ ಅಧಿಕಾರಿಗಳಿಗೆ ಅತಿ ಹೆಚ್ಚಿನ ಅಧಿಕಾರ ನೀಡುತ್ತವೆ. ಇದರಿಂದ, ವಿನಾಕಾರಣ ಮಾಧ್ಯಮಗಳ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನಿರ್ಬಂಧ ವಿಧಿಸುವ ಪ್ರಯತ್ನ ನಡೆಯುತ್ತದೆ’ ಎಂದು ಎನ್‌ಬಿಎ ಅರ್ಜಿ ಸಲ್ಲಿಸಿತ್ತು.

ADVERTISEMENT

‘ಮಾಧ್ಯಮ ಕಂಪನಿಗಳು ಅಥವಾ ಸಂಸ್ಥೆಗಳು ಸ್ವಯಂ ನಿಯಂತ್ರಣ ಸಂಸ್ಥೆಯನ್ನು ರೂಪಿಸಿಕೊಳ್ಳಬೇಕು. ಈ ಸಂಸ್ಥೆಯ ಮುಖ್ಯಸ್ಥರನ್ನಾಗಿ ಸುಪ್ರೀಂ ಕೋರ್ಟ್‌ ಅಥವಾ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಥವಾ ಖ್ಯಾತ ವ್ಯಕ್ತಿಗಳನ್ನು ನೇಮಿಸಬೇಕು.ನಿವೃತ್ತ ನ್ಯಾಯಮೂರ್ತಿಗಳ ಆದೇಶವನ್ನು ಜಂಟಿ ಕಾರ್ಯದರ್ಶಿ ಪರಿಶೀಲಿಸುತ್ತಾರೆ’ ಎಂದು ನಿಯಮದಲ್ಲಿ ತಿಳಿಸಲಾಗಿದೆ ಎಂದು ಎನ್‌ಬಿಎ ಪರ ವಕೀಲ ಮನಿಂದರ್‌ ಸಿಂಗ್‌ ನ್ಯಾಯಾಲಯಕ್ಕೆ ವಿವರಿಸಿದರು.

ಎನ್‌ಬಿಎ ಅರ್ಜಿಯ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆಯೂ ನ್ಯಾಯಾಲಯ ಕೇಂದ್ರಕ್ಕೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.