ಅಹಮದಾಬಾದ್: ಅಹಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟವರಲ್ಲಿ ಕೆಲವರ ಡಿಎನ್‌ಎ ಅವರ ಸಂಬಂಧಿಕರ ಡಿಎನ್‌ಎ ಜೊತೆ ಹೋಲಿಕೆ ಆಗದಿರುವ ಕಾರಣ, ಬೇರೆ ಸಂಬಂಧಿಕರ ಡಿಎನ್‌ಎ ಮಾದರಿಯನ್ನು ನೀಡುವಂತೆ ಸೂಚಿಸಲಾಗಿದೆ.
ಡಿಎನ್‌ಎ ಮಾದರಿ ಹೊಂದಾಣಿಕೆಯಾಗದ ಹೊರತು, ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲು ಸಾಧ್ಯವಿಲ್ಲ ಎಂದು ಅಹಮದಾಬಾದ್ ಸಿವಿಲ್ ಆಸ್ಪತ್ರೆಯ ಸಿವಿಲ್ ಸೂಪರಿಂಟೆಂಡೆಂಟ್ ರಾಕೇಶ್ ಜೋಶಿ ತಿಳಿಸಿದ್ದಾರೆ.
ಎಂಟು ಕುಟುಂಬದವರ ಮೊದಲ ಡಿಎನ್‌ಎ ಮಾದರಿ ಮೃತದೇಹಗಳೊಂದಿಗೆ ತಾಳೆಯಾಗಿಲ್ಲ. ಹಾಗಾಗಿ ಮತ್ತೊಬ್ಬ ಹತ್ತಿರದ ಸಂಬಂಧಿಯ ಡಿಎನ್‌ಎ ಮಾದರಿಯನ್ನು ಕೇಳಲಾಗಿದೆ ಎಂದು ತಿಳಿಸಿದ್ದಾರೆ.
ಸಂಬಂಧಿಗಳು ನೀಡಿದ ಮಾದರಿ ಹೊಂದಾಣಿಕೆಯಾಗದಿದ್ದರೆ, ಇನ್ನೊಬ್ಬ ಸಂಬಂಧಿಕರಿಂದ ಮಾದರಿಯನ್ನು ಕೇಳಬಹುದು. ಒಬ್ಬ ಸಹೋದರ ಅಥವಾ ಸಹೋದರಿ ಮಾದರಿಯನ್ನು ನೀಡಿದ್ದು, ಅದು ಹೊಂದಣಿಕೆಯಾಗದಿದ್ದರೆ ಇನ್ನೊಬ್ಬ ಸಹೋದರ ಅಥವಾ ಸಹೋದರಿಯ ಮಾದರಿಯನ್ನು ಪಡೆಯಲಾಗುತ್ತದೆ.
ಸಾಮಾನ್ಯವಾಗಿ ನಾವು ತಂದೆ, ಮಗ ಅಥವಾ ಮಗಳ ಡಿಎನ್‌ಎ ಮಾದರಿಯನ್ನು ಪಡೆಯುತ್ತೇವೆ. ಇಲ್ಲದಿದ್ದರೆ, ಕುಟುಂಬದ ಇನ್ನೊಬ್ಬ ಸದಸ್ಯರ ಮಾದರಿಯನ್ನು ತೆಗೆದುಕೊಳ್ಳುತ್ತೇವೆ. ಈ ಪ್ರಕ್ರಿಯೆಯಲ್ಲಿ ಒಡಹುಟ್ಟಿದವರ ಮಾದರಿಗಳು ಹೊಂದಿಕೆಯಾಗಿವೆ ಎಂದು ಜೋಶಿ ಹೇಳಿದ್ದಾರೆ.
ದುರಂತದಲ್ಲಿ ಮೃತರ ಪೈಕಿ 8 ಮಂದಿಯ ಕುಟುಂಬಸ್ಥರು ಮೊದಲು ನೀಡಿದ ಮಾದರಿ ಹೊಂದಿಕೆಯಾಗಿಲ್ಲ. ಹಾಗಾಗಿ ಮತ್ತೊಂದು ಮಾದರಿಯನ್ನು ನೀಡುವಂತೆ ಸೂಚಿಸಲಾಗಿದೆ. ಶುಕ್ರವಾರದವರೆಗೆ 231 ಮೃತದೇಹಗಳನ್ನು ಡಿಎನ್‌ಎ ಪರೀಕ್ಷೆ ಮೂಲಕ ಗುರುತು ಪತ್ತೆಹಚ್ಚಲಾಗಿದೆ ಮತ್ತು 210 ಮೃತದೇಹಗಳನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಡಿಎನ್‌ಎ ಹೊಂದಾಣಿಕೆ ಪ್ರಕ್ರಿಯೆಯು ಅತ್ಯಂತ ಸೂಕ್ಷ್ಮ ಪ್ರಕಿಯೆ. ಕಾನೂನು ಶಿಷ್ಟಾಚಾರಗಳನ್ನು ಪಾಲಿಸಿ, ನಡೆಸಲಾಗುತ್ತಿದೆ. ಮೃತದೇಹಗಳನ್ನು ತ್ವರಿತವಾಗಿ ಹಸ್ತಾಂತರಿಸಲು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ ಸಂಬಂಧಿತ ಸಂಸ್ಥೆಗಳು, ಸ್ಥಳೀಯ ಆಡಳಿತ ಅಧಿಕಾರಿಗಳು, ರಾಜ್ಯ ಸರ್ಕಾರದ ಆರೋಗ್ಯ ಮತ್ತು ಇತರ ಇಲಾಖೆಗಳು ಹಾಗೂ ವಿವಿಧ ಸಂಸ್ಥೆಗಳು ಅವಿಶ್ರಾಂತವಾಗಿ ಕೆಲಸ ಮಾಡುತ್ತಿವೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.