ಅಜಿತ್ ಪವಾರ್
– ಪಿಟಿಐ ಚಿತ್ರ
ಮುಂಬೈ: ‘ಅಜಿತ್ ಪವಾರ್ ಅವರ ನಿಧನದ ದಿನ ಇಲಾಖೆಯ ಮೂಲಕ ಯಾವುದೇ ಹೊಸ ಕಡತಗಳನ್ನು ವಿಲೇವಾರಿ ಮಾಡಿಲ್ಲ ಮತ್ತು ಯಾವುದೇ ಪ್ರಮಾಣಪತ್ರವನ್ನು ವಿತರಿಸಿಲ್ಲ’ ಎಂದು ಮಹಾರಾಷ್ಟ್ರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸೃಷ್ಟೀಕರಣ ನೀಡಿದೆ.
ಅಜಿತ್ ಪವಾರ್ ನಿಧನದ ನಂತರ ಅಲ್ಪಸಂಖ್ಯಾತ ಶಾಲೆಗಳಿಗೆ ಸಂಬಂಧಿಸಿದ 75 ಕಡತಗಳನ್ನು ತರಾತುರಿಯಲ್ಲಿ ವಿಲೇವಾರಿ ಮಾಡಿರುವುದು ವಿವಾದಕ್ಕೆ ಕಾರಣವಾಗಿತ್ತು.
ವಿವಾದದ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಇಲಾಖೆ, ‘ಜನವರಿ 28 ರಂದು ಡಿಜಿಟಲ್ ಸಹಿ ಮೂಲಕ ಯಾವುದೇ ಹೊಸ ಕಡತಗಳನ್ನು ವಿಲೇವಾರಿ ಮಾಡಿಲ್ಲ ಮತ್ತು ಯಾವುದೇ ಶಾಲೆಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ಪ್ರಮಾಣಪತ್ರವನ್ನು ವಿತರಿಸಲಾಗಿಲ್ಲ’ ಎಂದಿದೆ.
‘ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಸಂಪೂರ್ಣ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕ ಪಾರದರ್ಶಕವಾಗಿ ನಡೆಸಲಾಗುತ್ತದೆ. ಮೇ 27, 2013ರ ಸರ್ಕಾರದ ನಿರ್ಣಯದಲ್ಲಿ ನಿಗದಿಪಡಿಸಿದ ನಿಬಂಧನೆಗಳಿಗೆ ಅನುಸಾರವಾಗಿ ಅರ್ಜಿಗಳನ್ನು ಪರಿಶೀಲಿಸಿದ ನಂತರವೇ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ’ ಎಂದಿದೆ.
ಜನವರಿ 28ರಂದು ವಿಎಸ್‌ಆರ್ ವೆಂಚರ್ಸ್ ಒಡೆತನದ ವಿಮಾನ ಪತನಗೊಂಡು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹಾಗೂ ಇತರ ನಾಲ್ವರು ಮೃತಪಟ್ಟಿದ್ದರು.
ಆಗ ಅಲ್ಪಸಂಖ್ಯಾತ ಅಭಿವೃದ್ದಿ ಇಲಾಖೆಯ ಜವಾಬ್ದಾರಿಯನ್ನು ಅಜಿತ್ ಪವಾರ್ ನಿರ್ವಹಿಸುತ್ತಿದ್ದರು.
ವಿವಾದವೇನು?
ಅಜಿತ್ ಪವಾರ್ ಅವರು ನಿಧನ ಹೊಂದಿದ ದಿನ ಜನವರಿ 28ರಂದು ಮಧ್ಯಾಹ್ನ 3.09 ಕ್ಕೆ ಮೊದಲ ಅಲ್ಪಸಂಖ್ಯಾತ ಸ್ಥಾನಮಾನ ಪ್ರಮಾಣಪತ್ರವನ್ನು ನೀಡಲಾಗಿತ್ತು. ಅದೇ ದಿನ ಒಟ್ಟು 9 ಸಂಸ್ಥೆಗಳು ಅಲ್ಪಸಂಖ್ಯಾತ ಸ್ಥಾನಮಾನ ಪ್ರಮಾಣಪತ್ರವನ್ನು ಪಡದುಕೊಂಡಿದ್ದವು. ಜ. 29 ಮತ್ತು 30ರಂದು ದೊಡ್ಡ ಪ್ರಮಾಣದಲ್ಲಿ ಅನುಮೋದನೆ ನೀಡಲಾಗಿತ್ತು.
2025ರ ಆಗಸ್ಟ್‌ನಿಂದ 2026 ಜನವರಿ 27 ರವರೆಗೆ, ಪವಾರ್ ಅವರ ಅಧಿಕಾರಾವಧಿಯಲ್ಲಿ ಒಂದೇ ಒಂದು ಅಲ್ಪಸಂಖ್ಯಾತ ಸ್ಥಾನಮಾನ ಪ್ರಮಾಣಪತ್ರವನ್ನು ನೀಡಲಾಗಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಅವರ ಮರಣದ ಕೇವಲ ನಾಲ್ಕು ದಿನಗಳಲ್ಲಿ 75 ಸಂಸ್ಥೆಗಳಿಗೆ ಪ್ರಮಾಣಪತ್ರ ಹಸ್ತಾಂತರಿಸಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿತ್ತು.
ಏತನ್ಮಧ್ಯೆ, ಇಲಾಖೆಯ ಉಪ ಕಾರ್ಯದರ್ಶಿ ಮಿಲಿಂದ್ ಶೆಣೈ ಅವರನ್ನು ವರ್ಗಾವಣೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.