ಕ್ಯಾಂಪ್‌ಬೆಲ್ ವಿಲ್ಸನ್
ನವದೆಹಲಿ: ಅಹಮದಾಬಾದ್ ಏರ್ ಇಂಡಿಯಾ ವಿಮಾನ ದುರಂತದ ಬಗ್ಗೆ ವಿಮಾನ ಅಪಘಾತ ತನಿಖಾ ಬ್ಯೂರೊ (ಎಎಐಬಿ) ಶುಕ್ರವಾರ ತಡರಾತ್ರಿ ಪ್ರಾಥಮಿಕ ವರದಿಯನ್ನು ಬಿಡುಗಡೆ ಮಾಡಿದೆ. ವರದಿ ಬಗ್ಗೆ ಪ್ರತಿಕ್ರಿಯಿಸಿದ ಏರ್ ಇಂಡಿಯಾ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್, ಆರಂಭಿಕ ತನಿಖೆಯಲ್ಲಿ ವಿಮಾನ ಅಥವಾ ಎಂಜಿನ್‌ಗಳಲ್ಲಿ ಯಾವುದೇ ಯಾಂತ್ರಿಕ ಅಥವಾ ನಿರ್ವಹಣಾ ಸಮಸ್ಯೆಗಳು ಕಂಡುಬಂದಿಲ್ಲ ಎಂದು ಹೇಳಿದ್ದಾರೆ.
ವರದಿಯಲ್ಲಿ ಅಪಘಾತಕ್ಕೆ ಯಾವುದೇ ಕಾರಣವನ್ನು ಉಲ್ಲೇಖಿಸಲಾಗಿಲ್ಲ. ಎಲ್ಲಾ ಕಡ್ಡಾಯ ನಿರ್ವಹಣಾ ಕಾರ್ಯಗಳು ಪೂರ್ಣಗೊಂಡಿದ್ದವು. ಇಂಧನದ ಗುಣಮಟ್ಟ ತೃಪ್ತಿಕರವಾಗಿತ್ತು. ಟೇಕ್-ಆಫ್ ರೋಲ್‌ನಲ್ಲಿಯೂ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಇಬ್ಬರೂ ಪೈಲಟ್‌ಗಳು ವಿಮಾನ ಹಾರಾಟದಲ್ಲಿ ಸಾಕಷ್ಟು ಅನುಭವಿಗಳಾಗಿದ್ದರು ಎಂದು ಅವರು ಹೇಳಿದ್ದಾರೆ.
ಏರ್ ಇಂಡಿಯಾದ ಫ್ಲೀಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರತಿಯೊಂದು ಬೋಯಿಂಗ್ ವಿಮಾನಗಳನ್ನು ಅಪಘಾತದ ಕೆಲವೇ ದಿನಗಳ ಮೊದಲು ಪರಿಶೀಲಿಸಲಾಗಿತ್ತು. ಅವೆಲ್ಲವೂ ಕಾರ್ಯಾಚರಣೆಗೆ ಯೋಗ್ಯವೆಂದು ಕಂಡುಬಂದಿದ್ದವು. ಅಲ್ಲದೇ ಮುಂದಿನ ದಿನಗಳಲ್ಲಿಯೂ ಅಗತ್ಯವಿರುವ ಎಲ್ಲಾ ತಪಾಸಣೆಗಳನ್ನು ಮಾಡುವುದಾಗಿ ಅವರು ತಿಳಿಸಿದ್ದಾರೆ.
ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಳ್ಳುವುದಕ್ಕೂ ಮುನ್ನ ಅದರ ಎರಡೂ ಎಂಜಿನ್‌ಗಳಿಗೆ ಇಂಧನ ಪೂರೈಸುವ ಸ್ವಿಚ್‌ಗಳು ‘ಕಟ್ ಆಫ್ ಸ್ಥಿತಿಯಲ್ಲಿ ಇದ್ದವು’ ಮತ್ತು ಇದರಿಂದ ಪೈಲಟ್‌ಗಳು ಗೊಂದಲಕ್ಕೀಡಾಗಿದ್ದರು ಎಂಬ ವಿಷಯ ವಿಮಾನ ಅಪಘಾತ ತನಿಖಾ ಬ್ಯೂರೊ ತನ್ನ ವರದಿಯಲ್ಲಿ ಹೇಳಿದೆ.
ಈ ಲೋಪದಿಂದಾಗಿ ವಿಮಾನವು ಟೇಕ್–ಆಫ್ ಆದ ಕೆಲವೇ ಸೆಕೆಂಡ್‌ಗಳಲ್ಲಿ ಕೆಳಗಿಳಿಯಲು ಆರಂಭಿಸಿ, ದುರಂತ ಸಂಭವಿಸಿತು ಎಂದು ಎಎಐಬಿ ಪ್ರಾಥಮಿಕ ತನಿಖಾ ವರದಿ ತಿಳಿಸಿದೆ.
ಬ್ರಿಟನ್‌ನ ವಾಯು ಅಪಘಾತ ತನಿಖಾ ಶಾಖೆ ಮತ್ತು ಅಮೆರಿಕ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯ ನೆರವಿನಿಂದ ಎಎಐಬಿ ಈ ತನಿಖೆಯನ್ನು ನಡೆಸಿದೆ.
ಜೂನ್ 12ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ತೆರಳಲು ಏರ್ ಇಂಡಿಯಾ ವಿಮಾನ (ಬೋಯಿಂಗ್ 787 ಡ್ರೀಮ್‌ಲೈನರ್) ಟೇಕ್–ಆಫ್ ಆದ ಕೆಲವೇ ಕ್ಷಣಗಳಲ್ಲಿ ಮೇಘಾನಿನಗರದ ವೈದ್ಯಕೀಯ ಕಾಲೇಜಿನ ಸಂಕೀರ್ಣದಲ್ಲಿದ್ದ ಕಟ್ಟಡಕ್ಕೆ ಅಪ್ಪಳಿಸಿತ್ತು. ವಿಮಾನದಲ್ಲಿದ್ದ 241 ಪ್ರಯಾಣಿಕರು, ಸಿಬ್ಬಂದಿ ಹಾಗೂ ಘಟನಾ ಸ್ಥಳದಲ್ಲಿದ್ದ 19 ಮಂದಿ ಮೃತಪಟ್ಟಿದ್ದರು. ಪ್ರಯಾಣಿಕರೊಬ್ಬರು ಅಪಾಯದಿಂದ ಪಾರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.