ADVERTISEMENT

ಅಸ್ಸಾಂ | ಅಧಿವೇಶನ ಅವಧಿಯಲ್ಲಿ ಶುಕ್ರವಾರದ ನಮಾಜ್ ಬ್ರೇಕ್ ಸ್ಥಗಿತಗೊಳಿಸಿದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2025, 16:12 IST
Last Updated 21 ಫೆಬ್ರುವರಿ 2025, 16:12 IST
<div class="paragraphs"><p>ಹಿಮಂತ ಬಿಸ್ವ ಶರ್ಮಾ</p></div>

ಹಿಮಂತ ಬಿಸ್ವ ಶರ್ಮಾ

   

-ಪಿಟಿಐ ಚಿತ್ರ

ಗುವಾಹಟಿ: ಅಸ್ಸಾಂನ ವಿಧಾನಸಭೆಯಲ್ಲಿ ಹಲವು ದಶಕಗಳಿಂದ ಪಾಲಿಸಿಕೊಂಡು ಬರಲಾಗುತ್ತಿದ್ದ ಶುಕ್ರವಾರದ ನಮಾಜ್‌ ಬಿಡುವನ್ನು ರದ್ದುಪಡಿಸಿ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರ ಆದೇಶಿಸಿದೆ. 

ADVERTISEMENT

ಸದ್ಯ ಬಜೆಟ್ ಅಧಿವೇಶನ ನಡೆಯುತ್ತಿದೆ. ಆಗಸ್ಟ್‌ನಲ್ಲಿ ನಡೆದಿದ್ದ ಅಧಿವೇಶನ ಅವಧಿಯಲ್ಲಿ ನಮಾಜ್‌ ಬಿಡುವು ನೀಡಲಾಗುತ್ತಿತ್ತು. 

ಸರ್ಕಾರದ ಈ ಕ್ರಮಕ್ಕೆ ಎಐಯುಡಿಎಫ್‌ ಶಾಸಕ ರಫೀಖುಲ್‌ ಇಸ್ಲಾಮ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಬಹುತಮದ ಆಧಾರದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಧನದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ 30 ಶಾಸಕರಿದ್ದಾರೆ. ಸರ್ಕಾರದ ಈ ನಿರ್ಧಾರದ ವಿರುದ್ಧ ನಮ್ಮ ನಿಲುವನ್ನು ಪ್ರಕಟಿಸಿದ್ದೇವೆ. ಬಿಜೆಪಿ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಿರ್ಧಾರ ತೆಗೆದುಕೊಂಡಿದ್ದಾರೆ’ ಎಂದಿದ್ದಾರೆ.

ವಿರೋಧಪಕ್ಷವಾದ ಕಾಂಗ್ರೆಸ್‌ನ ನಾಯಕ ದೇಬಬ್ರತ ಶೈಖಿಯಾ ಪ್ರತಿಕ್ರಿಯಿಸಿ, ‘ಶುಕ್ರವಾರದಂದು ಮುಸ್ಲಿಂ ಶಾಸಕರಿಗೆ ಅನುಕೂಲವಾಗುವ ಉದ್ದೇಶದಿಂದ ಈ ಬಿಡುವು ನೀಡಲಾಗುತ್ತಿತ್ತು. ನಮಾಜ್‌ಗೆ ತೆರಳೇಬೇಕಾದ್ದರಿಂದ ನಮ್ಮ ಪಕ್ಷದ ಹಾಗೂ ಎಐಯುಡಿಎಫ್‌ನ ಕೆಲ ಶಾಸಕರು ಬಹುಮುಖ್ಯವಾದ ಚರ್ಚೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಶುಕ್ರವಾರದಂದು ವಿಶೇಷ ಪ್ರಾರ್ಥನೆ ಸಲ್ಲಿಸುವ ಪದ್ಧತಿಯನ್ನು ಮುಸ್ಲಿಮರು ಅನುಸರಿಸುತ್ತಿರುವುದರಿಂದ, ಅವರಿಗೆ ಬಿಡುವು ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

‘ಸಂವಿಧಾನದ ಜಾತ್ಯತೀತ ಗುಣಕ್ಕೆ ಅನುಗುಣವಾಗಿ ಅಸ್ಸಾಂನ ವಿಧಾನಸಭೆಯು ಶುಕ್ರವಾರವೂ ವಾರದ ಇತರ ದಿನಗಳಂತೆಯೇ ಕಾರ್ಯ ನಿರ್ವಹಿಸಲಿದೆ. ಇದನ್ನೇ ನಿಯಮಾವಳಿ ಸಮಿತಿಯ ಮುಂದಿಟ್ಟು, ಬಹುಮತದ ಆಧಾರದಲ್ಲಿ ಅದು ಸ್ವೀಕಾರವಾಗಿದೆ’ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ.

‘1937ರಲ್ಲಿ ಮುಸ್ಲೀಂ ಲೀಗ್‌ನ ಸೈಯದ್‌ ಸಾದುಲ್ಲಾ ಅವರು ಶುಕ್ರವಾರದ ನಮಾಜ್‌ಗೆ ಬಿಡುವು ನೀಡುವ ಪದ್ಧತಿ ಜಾರಿಗೆ ತಂದರು. ವಸಾಹತುಶಾಹಿ ವ್ಯವಸ್ಥೆಯ ಕುರುಹು ಆಗಿದ್ದ ಈ ಪದ್ಧತಿಯನ್ನು ಕೈಬಿಡಲು ನಿರ್ಧರಿಸಲಾಗಿದೆ’ ಎಂದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.