ADVERTISEMENT

ಎನ್‌ಆರ್‌ಸಿಗೆ ಆಂಧ್ರ ಪ್ರದೇಶದ ಬೆಂಬಲವಿಲ್ಲ: ಜಗನ್‌ ಮೋಹನ ರೆಡ್ಡಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2019, 13:33 IST
Last Updated 23 ಡಿಸೆಂಬರ್ 2019, 13:33 IST
   

ಹೈದರಾಬಾದ್‌: ಕೇಂದ್ರದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ಜಾರಿಗೆ ಅವಕಾಶ ನೀಡುವುದಿಲ್ಲ ಎಂಬ ದೇಶದ ಹಲವು ರಾಜ್ಯಗಳ ಮುಖ್ಯಮಂತ್ರಿಗಳ ಹೇಳಿಕೆಗೆ ಸದ್ಯ ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್‌ ಜಗನ್‌ ಮೋಹನ ರೆಡ್ಡಿ ಅವರೂ ಧ್ವನಿಗೂಡಿಸಿದ್ದಾರೆ.

ಯಾವುದೇ ಸಂದರ್ಭದಲ್ಲೂಆಂಧ್ರ ಪ್ರದೇಶ ಎನ್‌ಆರ್‌ಸಿಯನ್ನು ಬೆಂಬಲಿಸುವುದಿಲ್ಲ ಎಂದು ಜಗನ್‌ ಮೋಹನ ರೆಡ್ಡಿ ಅವರು ಸ್ಪಷ್ಟಪಡಿಸಿದ್ದಾರೆ.

‘ಎನ್‌ಆರ್‌ಸಿ ಬಗ್ಗೆ ನೀವು ಸ್ಪಷ್ಟ ನಿಲುವು ಹೊಂದಬೇಕು ಎಂದು ಹಲವು ಮುಸ್ಲಿಂ ಸೋದರರು ನನ್ನನ್ನು ಕೇಳಿಕೊಂಡಿದ್ದಾರೆ. ಹೀಗಾಗಿ ಈ ಬಗ್ಗೆ ನಾನು ಸ್ಪಷ್ಟನೆ ನೀಡುತ್ತಿದ್ದೇನೆ. ದೇಶದಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಎನ್‌ಆರ್‌ಸಿಗೆ ನಮ್ಮ ಸಹಮತವಿಲ್ಲ. ಅದನ್ನು ಬೆಂಬಲಿಸುವುದಿಲ್ಲ. ಯಾವುದೇ ಸಂದರ್ಭದಲ್ಲೂ ಎನ್‌ಆರ್‌ಸಿ ಜಾರಿಗೆ ಅವಕಾಶ ನೀಡುವುದಿಲ್ಲ,’ ಎಂದು ಅವರು ಹೇಳಿದ್ದಾರೆ.

ADVERTISEMENT

ಕಡಪಾ ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಅವರು ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದ್ದಾರೆ.

‘ಆಂಧ್ರ ಸರ್ಕಾರದ ಉಪ ಮುಖ್ಯಮಂತ್ರಿ ಅಝ್ಮತ್‌ ಬಾಷಾ ಶೇಖ್‌ ಬೇಪರಿ ಅವರು ನನ್ನನ್ನು ಭೇಟಿ ಮಾಡಿ ಎನ್‌ಆರ್‌ಸಿಗೆ ನಮ್ಮ ಸರ್ಕಾರದ ಬೆಂಬಲವಿಲ್ಲ ಎಂದು ಘೋಷಿಸಬೇಕು ಎಂದು ಕೋರಿದ್ದಾರೆ,’ ಎಂದೂ ಅವರು ತಿಳಿಸಿದರು.

‘ಕೇಂದ್ರಕ್ಕೆ ನೀವು ನೀಡುತ್ತಿರುವ ಬೆಂಬಲದ ಬಗ್ಗೆ ಮರುಪರಿಶೀಲನೆ ಮಾಡಿ,’ ಎಂದು ಜಗನ್‌ ಮೋಹನ ರೆಡ್ಡಿ ಕುರಿತುಎಂಐಎಂ ಪಕ್ಷದ ವರಿಷ್ಠ ಅಸಾದುದ್ದೀನ್‌ ಓವೈಸಿ ಅವರೂ ಹೇಳಿಕೆ ನೀಡಿದ್ದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.