ADVERTISEMENT

ಪ್ರಜಾಪ್ರಭುತ್ವದಲ್ಲಿ ಇಂತಹ ಹಿಂಸಾಚಾರ ಘಟನೆಗಳಿಗೆ ಸ್ಥಾನವಿಲ್ಲ: ಕಾಂಗ್ರೆಸ್

ಪಿಟಿಐ
Published 27 ಜನವರಿ 2021, 1:08 IST
Last Updated 27 ಜನವರಿ 2021, 1:08 IST
ಗಣರಾಜ್ಯೋತ್ಸವ ದಿನದಂದು ರೈತರು ನಡೆಸಿದ ಟ್ರ್ಯಾಕ್ಟರ್ ಪೆರೇಡ್‌ನಲ್ಲಿ ಹಿಂಸಾಚಾರ
ಗಣರಾಜ್ಯೋತ್ಸವ ದಿನದಂದು ರೈತರು ನಡೆಸಿದ ಟ್ರ್ಯಾಕ್ಟರ್ ಪೆರೇಡ್‌ನಲ್ಲಿ ಹಿಂಸಾಚಾರ   

ನವದೆಹಲಿ: ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಗಣರಾಜ್ಯೋತ್ಸವ ದಿನದಂದು ರೈತರು ರಾಷ್ಟ್ರ ರಾಜಧಾನಿಯಲ್ಲಿ ನಡೆಸಿದ ಟ್ರ್ಯಾಕ್ಟರ್ ಪೆರೇಡ್ ಭಾರಿ ಹಿಂಸಾಚಾರಕ್ಕೆ ತಿರುಗಿತ್ತು. ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್ ಪಕ್ಷವು ಪ್ರಜಾಪ್ರಭುತ್ವದಲ್ಲಿ ಇಂತಹ ಹಿಂಸಾಚಾರ ಘಟನೆಗಳಿಗೆ ಸ್ಥಾನವಿಲ್ಲ ಎಂದು ಹೇಳಿದೆ.

ಅದೇ ವೇಳೆಗೆ ಪ್ರಧಾನಿ ನರೇಂದ್ರ ಮೋದಿ ಅವರು ದುರಹಂಕಾರದಿಂದ ಬಿಟ್ಟು ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿದೆ.

ಮಂಗಳವಾರದ ಘಟನೆಗೆ ಕೇಂದ್ರ ಸರ್ಕಾರವೇ ಸಂಪೂರ್ಣ ಹೊಣೆಯಾಗಿದೆ. ರೈತರ ಬೇಡಿಕೆಗಳನ್ನು ಈಡೇರಿಸಲು ಅಥವಾ ಯಾವುದೇ ಸಮಸ್ಯೆ ಬಗೆಹರಿಸಲು ಯಾವುದೇ ಪ್ರಸ್ತಾಪವನ್ನು ಮುಂದಿರಿಸಿಲ್ಲ ಎಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿಕೆ ನೀಡಿದರು.

ADVERTISEMENT

ಸರ್ಕಾರ ಹಾಗೂ ಪ್ರಜೆಗಳ ನಡುವೆ 61 ದಿನಗಳ ಮುಖಾಮುಖಿ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ಸರ್ಕಾರದಿಂದಾಗಿ ಜನರು ಸಂಕಟಕ್ಕೊಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ದುರಹಂಕಾರವನ್ನು ಬಿಟ್ಟು ರೈತರ ಮನವಿಗೆ ಸ್ಪಂದಿಸಬೇಕು ಎಂದು ಹೇಳಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ದುರಹಂಕಾರವನ್ನು ಬಿಟ್ಟು ರಾಜಧರ್ಮದ ಮಾರ್ಗದಲ್ಲಿ ಸಾಗಬೇಕು. ಇದುವೇ 72ನೇ ಗಣರಾಜ್ಯೋತ್ಸವದಲ್ಲಿ ನೀಡಬಹುದಾದ ನಿಜವಾದ ಸಂದೇಶವಾಗಿದೆ. ಯಾವುದೇ ವಿಳಂಬ ಮಾಡದೆ ರೈತ ವಿರೋಧಿ ಕಾಯ್ದೆಗಳನ್ನು ಹಂತೆಗೆದುಕೊಳ್ಳಬೇಕು. ಇದು ದೇಶದ 62 ಕೋಟಿ ಅನ್ನದಾತರ ಕರೆ ಕೂಡಾ ಆಗಿದೆ ಎಂದವರು ತಿಳಿಸಿದರು.

ದೆಹಲಿಯ ಹಿಂಸಾಚಾರ ಘಟನೆಗಳಿಂದ ಕಾಂಗ್ರೆಸ್ ಪಕ್ಷ ಹಾಗೂ ಇಡೀ ದೇಶವೇ ನೋವಿಗೊಳಗಾಗಿದೆ. ಪ್ರಜಾಪ್ರಭುತ್ವದಲ್ಲಿ ಇಂತಹ ಘಟನೆಗಳಿಗೆ ಸ್ಥಾನವಿಲ್ಲ. ಚಳವಳಿಗಾರರು ತಮ್ಮ ಗುರಿಯನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಅಹಿಂಸೆ ಹಾಗೂ ಶಾಂತಿ ರೈತ ಆಂದೋಲನದ ಬಹುದೊಡ್ಡ ಶಕ್ತಿಯಾಗಿ ಉಳಿದಿದೆ. ಮೂರು ಕೃಷಿ ಕಾಯ್ದೆಗಳನ್ನುರದ್ದುಗೊಳಿಸುವ ವರೆಗೂ ರೈತರು ಶಾಂತಿಯುತ ಹೋರಾಟಕ್ಕೆ ಬದ್ಧರಾಗಿರುತ್ತಾರೆ ಎಂದು ನಾವು ಪ್ರಮಾಣಿಕವಾಗಿ ಭಾವಿಸುತ್ತೇವೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.