ADVERTISEMENT

ಭಾರಿ ಮಳೆಗೆ ಉತ್ತರ ಭಾರತ ತತ್ತರ: ಪಂಜಾಬ್‌ನಲ್ಲಿ 30 ಜನ ಸಾವು‌

206.83 ಮೀಟರ್‌ ತಲುಪಿದ ಯಮುನಾ ನದಿ ನೀರಿನ ಮಟ್ಟ

ಪಿಟಿಐ
Published 3 ಸೆಪ್ಟೆಂಬರ್ 2025, 14:13 IST
Last Updated 3 ಸೆಪ್ಟೆಂಬರ್ 2025, 14:13 IST
<div class="paragraphs"><p>ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿ ಉಕ್ಕಿ ಹರಿಯುತ್ತಿರುವ ಬಿಯಾಸ್‌ ನದಿ</p></div>

ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿ ಉಕ್ಕಿ ಹರಿಯುತ್ತಿರುವ ಬಿಯಾಸ್‌ ನದಿ

   

– ಪಿಟಿಐ ಚಿತ್ರ

ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಜಮ್ಮು–ಕಾಶ್ಮೀರ, ಹಿಮಾಚಲ ಪ್ರದೇಶ, ಪಂಜಾಬ್‌ ಹಾಗೂ ದೆಹಲಿಯಲ್ಲಿ ನದಿಗಳು ಉಕ್ಕಿ ಹರಿಯುತ್ತಿವೆ. ಪಂಜಾಬ್‌ನಲ್ಲಿ ಪ್ರವಾಹ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದರೆ, ದೆಹಲಿಯಲ್ಲಿ ಯಮುನಾ ನದಿ ನೀರಿನ ಮಟ್ಟ ಹೆಚ್ಚಾಗಿ ಪ್ರವಾಹದ ಆತಂಕ ಎದುರಾಗಿದೆ. ಮನೆಗಳು ಕುಸಿದು, ಹಿಮಾಚಲ ಪ್ರದೇಶದಲ್ಲಿ ಐವರು ಸಾವಿಗೀಡಾಗಿದ್ದಾರೆ. 

ನವದೆಹಲಿ/ಶ್ರೀನಗರ: ದೆಹಲಿಯಲ್ಲಿ ಯಮುನಾ ನದಿ ನೀರಿನ ಮಟ್ಟವು ಬುಧವಾರ 206.83 ಮೀಟರ್‌ ದಾಖಲಾಗಿದ್ದು, ಪ್ರವಾಹದ ಭೀತಿ ಎದುರಾಗಿದೆ. ತಗ್ಗು ಪ್ರದೇಶಗಳಲ್ಲಿ ಹಾಗೂ ನದಿ ತಟದಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸಲಾಗುತ್ತಿದೆ. ಕಳೆದ ಕೆಲ ದಿನಗಳಿಂದ ದೆಹಲಿಯಲ್ಲಿ ಭಾರಿ ಮಳೆ ಸುರಿಯುತ್ತಿದೆ. 

ADVERTISEMENT

‘ವಜೀರಾಬಾದ್‌ ಮತ್ತು ಹತ್ನಿಕುಂಡ್‌ ಬ್ಯಾರೇಜ್‌ಗಳಿಂದ ಹೆಚ್ಚಿನ ಪ್ರಮಾಣದ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಹೀಗಾಗಿ ನದಿ ನೀರಿನ ಮಟ್ಟ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ’ ಎಂದು ಅಧಿಕಾರಿಗಳು ತಿಳಿಸಿದರು.  

ಹತ್ನಿಕುಂಡ್‌ ಬ್ಯಾರೇಜ್‌ನಿಂದ 1.62 ಲಕ್ಷ ಕ್ಯೂಸೆಕ್‌ ಹಾಗೂ ವಜೀರಾಬಾದ್‌ನಿಂದ 1.38 ಲಕ್ಷ ಕ್ಯೂಸೆಕ್‌ ನೀರನ್ನು ಯಮುನಾ ನದಿಗೆ ಬುಧವಾರ ಮುಂಜಾನೆ 8 ಗಂಟೆ ವೇಳೆಗೆ ಬಿಡುಗಡೆ ಮಾಡಲಾಯಿತು.  

ಪ್ರವಾಹದ ಆತಂಕ: ಜಮ್ಮು ಮತ್ತು ಕಾಶ್ಮೀರದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಚಿನಾಬ್‌ ಹಾಗೂ ಝೇಲಮ್ ನದಿಗಳು ಅಪಾಯದ ಮಟ್ಟ ತಲುಪಿವೆ. ಇದರಿಂದ ಪ್ರವಾಹ ಉಂಟಾಗುವ ಆತಂಕ ಸೃಷ್ಟಿಯಾಗಿದೆ.

ರಿಯಾಸಿ ಜಿಲ್ಲೆಯಲ್ಲಿರುವ ವೈಷ್ಣೋದೇವಿ ದೇವಸ್ಥಾನದ ಮಾರ್ಗದಲ್ಲಿ ಭೂಕುಸಿತ ಸಂಭವಿಸಿದ್ದು, ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. 

‘ಭೂಕುಸಿತದಿಂದಾಗಿ ದೇವಸ್ಥಾನ ಸಂಪರ್ಕಿಸುವ ಮಾರ್ಗವು ಸ್ಥಗಿತಗೊಂಡಿದೆ. ಘಟನೆ ವೇಳೆ ಸ್ಥಳದಲ್ಲಿ ಯಾತ್ರಿಕರಿಲ್ಲದ ಕಾರಣ ಯಾವುದೇ ಸಾವು– ನೋವು ಸಂಭವಿಸಿಲ್ಲ. ಅವಶೇಷಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು. 

ಜಮ್ಮು ಮತ್ತು ಕಟ್ರಾ ನಿಲ್ದಾಣಗಳಿಗೆ ಬರುವ ಮತ್ತು ಇಲ್ಲಿಂದ ಹೊರಹೋಗುವ 68 ರೈಲುಗಳನ್ನು ಸೆ.30ರವರೆಗೆ ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಘೋಷಿಸಿದೆ. ಅಲ್ಲದೇ 24 ರೈಲುಗಳ ಸಂಚಾರ ಪುನಾರಂಭಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. 

1910ರ ಬಳಿಕ ಜಮ್ಮುವಿನಲ್ಲಿ ದಾಖಲೆಯ 380 ಮಿ.ಮೀ. ಮಳೆ ಸುರಿದಿದೆ. ಮಳೆ ಮತ್ತು ಹಠಾತ್ ಪ್ರವಾಹದಿಂದ ಪಠಾಣ್‌ಕೋಟ್‌–ಜಮ್ಮು ವಿಭಾಗದ ಹಲವು ಸ್ಥಳಗಳಲ್ಲಿ ರೈಲು ಸಂಚಾರ ಸ್ಥಗಿತಗೊಂಡಿದೆ. 

ಜಮ್ಮು ಮತ್ತು ಕಾಶ್ಮೀರದಲ್ಲಿ ಆಗಸ್ಟ್‌ 13ರಿಂದ ಈವರೆಗೆ ಮಳೆ ಸಂಬಂಧಿತ ವಿವಿಧ ಅವಘಡಗಳಲ್ಲಿ 160 ಜನರು ಸಾವಿಗೀಡಾಗಿದ್ದಾರೆ. 

ಜಮ್ಮುವಿನಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಆ.26ರಿಂದ ರಸ್ತೆ ಮತ್ತು ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿರುವುದರಿಂದ ಹಲವು ಯಾತ್ರಿಕರು ಸಿಲುಕಿಕೊಂಡಿದ್ದರು. ಕಟ್ರಾದ ವೈಷ್ಣೋದೇವಿ ದೇಗುಲದ ಬಳಿ ಸಂಭವಿಸಿದ ಭೂಕುಸಿತದಲ್ಲಿ 34 ಜನರು ಮೃತಪಟ್ಟಿದ್ದಾರೆ. 

ಪಂಜಾಬ್‌ನಲ್ಲಿ ಪ್ರವಾಹ: 30 ಮಂದಿ ಬಲಿ

1988ರ ಬಳಿಕ ಇದೀಗ ಮತ್ತೆ ಭೀಕರ ಪ್ರವಾಹಕ್ಕೆ ತುತ್ತಾಗಿರುವ ಪಂಜಾಬ್‌ನಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಎಲ್ಲಾ 23 ಜಿಲ್ಲೆಗಳೂ ಪ್ರವಾಹದಿಂದ ಹಾನಿಗೊಳಗಾಗಿದ್ದು ಈವರೆಗೆ 30 ಮಂದಿ ಮೃತಪಟ್ಟಿದ್ದಾರೆ.  ರಕ್ಷಣೆ ಮತ್ತು ಪರಿಹಾರ ಕಾರ್ಯ ಮುಂದುವರಿದಿದೆ. ರೂಪನಗರ ಮತ್ತು ಪಟಿಯಾಲ ಜಿಲ್ಲೆಗಳಲ್ಲಿರುವ ಜನರಿಗೆ ಮತ್ತಷ್ಟು ಮಳೆಯ ಎಚ್ಚರಿಕೆ ನೀಡಲಾಗಿದೆ. ಸೆ.7ರವರೆಗೆ ಎಲ್ಲಾ ಶಾಲಾ ಕಾಲೇಜುಗಳನ್ನು ಬಂದ್‌ ಮಾಡಲಾಗಿದೆ.  ಜಮ್ಮು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದಲ್ಲಿ ಮಳೆ ಕಡಿಮೆಯಾಗದ ಕಾರಣ ಹಿಮಾಲಯದಲ್ಲಿ ಹುಟ್ಟುವ ಬಿಯಾಸ್‌ ರಾವಿ ಹಾಗೂ ಸತಲುಜ್ ನದಿಗಳು ಉಕ್ಕಿ ಹರಿಯುತ್ತಿವೆ. 

ಕುಸಿದ ಮನೆಗಳು: ಐವರು ಸಾವು 

ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ ಮುಂದುವರಿದಿದ್ದು ಮನೆ ಕುಸಿತದ ಪ್ರತ್ಯೇಕ ಘಟನೆಗಳಲ್ಲಿ ಐವರು ಮಂಗಳವಾರ ಮೃತಪಟ್ಟಿದ್ದಾರೆ. ಅನೇಕ ಮನೆಗಳು ಹಾನಿಗೊಂಡಿವೆ. ಹಠಾತ್ ಪ್ರವಾಹ ಮತ್ತು ಭೂಕುಸಿತದಿಂದಾಗಿ 4 ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ 1337 ರಸ್ತೆಗಳನ್ನು ಬಂದ್ ಮಾಡಲಾಗಿದೆ. ಸ್ಥಳೀಯ ಹವಾಮಾನ ಇಲಾಖೆ ಘಟಕವು ಹಲವು ಜಿಲ್ಲೆಗಳಲ್ಲಿ ಮಳೆಯ ಎಚ್ಚರಿಕೆ ನೀಡಿದ್ದು ಆರೆಂಜ್‌ ಅಲರ್ಟ್ ಘೋಷಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.