ADVERTISEMENT

'ಸರ್ಕಾರಿ ಕೆಲಸದಲ್ಲಿರುವವರನ್ನು ರಾಜ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸುವಂತಿಲ್ಲ'

ಪಿಟಿಐ
Published 12 ಮಾರ್ಚ್ 2021, 10:46 IST
Last Updated 12 ಮಾರ್ಚ್ 2021, 10:46 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೇಂದ್ರ ಅಥವಾ ರಾಜ್ಯ ಸರ್ಕಾರದ ಉದ್ಯೋಗದಲ್ಲಿರುವ ಅಥವಾ ಈ ಸರ್ಕಾರಗಳೊಂದಿಗೆ ಸಂಬಂಧ ಹೊಂದಿರುವವರು ರಾಜ್ಯ ಚುನಾವಣಾ ಆಯುಕ್ತರಾಗಲು ಸಾಧ್ಯವಿಲ್ಲ, ಅವರು ಸ್ವತಂತ್ರ ವ್ಯಕ್ತಿ ಆಗಿರಬೇಕು ಎಂದು ಸುಪ್ರೀಂಕೋರ್ಟ್‌ ಶುಕ್ರವಾರ ತಿಳಿಸಿದೆ.

ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಗೋವಾ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಕೋರ್ಟ್‌ ಈ ತೀರ್ಪು ನೀಡಿದೆ.

ಚುನಾವಣಾ ಆಯುಕ್ತರು ಸ್ವತಂತ್ರ ವ್ಯಕ್ತಿಗಳಾಗಿರಬೇಕು. ಯಾವುದೇ ರಾಜ್ಯವು, ಸರ್ಕಾರಿ ಕೆಲಸದಲ್ಲಿರುವ ವ್ಯಕ್ತಿಯನ್ನು ಈ ಹುದ್ದೆಗೆ ನೇಮಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.

ADVERTISEMENT

ನ್ಯಾಯಮೂರ್ತಿ ಆರ್.ಎಫ್.ನಾರಿಮನ್ ನೇತೃತ್ವದ ನ್ಯಾಯಪೀಠವು ಗೋವಾ ರಾಜ್ಯ ಚುನಾವಣಾ ಆಯೋಗಕ್ಕೆ ಇಂದಿನಿಂದ 10 ದಿನಗಳಲ್ಲಿ ಪಂಚಾಯತ್ ಚುನಾವಣೆಯ ಅಧಿಸೂಚನೆ ಹೊರಡಿಸಿ ಏಪ್ರಿಲ್ 30 ರೊಳಗೆ ಮತದಾನ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿತು.

ಸಾಂವಿಧಾನಿಕ ಆದೇಶದ ಪ್ರಕಾರ, ರಾಜ್ಯ ಚುನಾವಣಾ ಆಯೋಗದ ಕಾರ್ಯಚಟುವಟಿಕೆಯಲ್ಲಿ ರಾಜ್ಯ ಹಸ್ತಕ್ಷೇಪ ಮಾಡಬಾರದು ಎಂದೂ ಅದು ಹೇಳಿತು.

ಗೋವಾ ಸರ್ಕಾರವು ತನ್ನ ಕಾನೂನು ಕಾರ್ಯದರ್ಶಿಗೆ ರಾಜ್ಯ ಚುನಾವಣಾ ಆಯುಕ್ತರ ಹೆಚ್ಚುವರಿ ಉಸ್ತುವಾರಿಯನ್ನು ನೀಡಿದೆ ಎಂಬ ಅಂಶವನ್ನು ವಿಚಾರಣೆ ವೇಳೆಯಲ್ಲಿ ನ್ಯಾಯಾಲಯ ಪ್ರಮುಖವಾಗಿ ಗಮನಿಸಿ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.