ADVERTISEMENT

ಸಮುದಾಯದಲ್ಲಿ ಹರಡುವ ಹಂತದಲ್ಲಿದೆ ಓಮೈಕ್ರಾನ್‌- ಐಎನ್‌ಎಸ್‌ಎಸಿಒಜಿ

ಪಿಟಿಐ
Published 24 ಜನವರಿ 2022, 7:10 IST
Last Updated 24 ಜನವರಿ 2022, 7:10 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ರೂಪಾಂತರ ಸೋಂಕು ‘ಓಮೈಕ್ರಾನ್‌’ ಈಗದೇಶದಲ್ಲಿ ಸಮುದಾಯದಲ್ಲಿ ಹರಡುವ ಹಂತದಲ್ಲಿದೆ. ಬಹುತೇಕ ಮೆಟ್ರೊ ನಗರಗಳಲ್ಲಿ ಇದು ಪ್ರಬಲವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಪ್ರಕರಣಗಳು ವರದಿಯಾಗುತ್ತಿವೆ.

ಐಎನ್‌ಎಸ್‌ಎಸಿಒಜಿ (ಇಂಡಿಯಾ ಸಾರ್ಸ್‌ ಕೋವ್‌ –2 ಜೆನೋಮಿಕ್‌ ಕನ್ಸೋರ್ಟಿಯಂ) ಭಾನುವಾರ ಬಿಡುಗಡೆ ಮಾಡಿದ ವಾರ್ತಾಪತ್ರ ಇದನ್ನು ದೃಢಪಡಿಸಿದೆ. ದೇಶದಲ್ಲಿ ಓಮೈಕ್ರಾನ್‌ನ ಉಪ ರೂಪಾಂತರ ತಳಿ ‘ಬಿಎ.2’ ಪ್ರಕರಣಗಳು ಗಮನಾರ್ಹ ಸಂಖ್ಯೆಯಲ್ಲಿ ಪತ್ತೆಯಾಗಿವೆ ಎಂದೂ ತಿಳಿಸಿದೆ.

ಈಗ ದೃಢಪಟ್ಟಿರುವ ಓಮೈಕ್ರಾನ್‌ನ ಬಹುತೇಕ ಪ್ರಕರಣಗಳು ಲಕ್ಷಣ ರಹಿತವಾಗಿವೆ ಅಥವಾ ಅಲ್ಪ ಪರಿಣಾಮದ್ದಾಗಿವೆ. ಮೂರನೇ ಅಲೆಯಲ್ಲಿ ಆಸ್ಪತ್ರೆಗೆ ದಾಖಲು ಅಥವಾ ಐಸಿಯುಗೆ ಸೇರುವವರ ಸಂಖ್ಯೆ ಹೆಚ್ಚಿದ್ದರೂ ಅಪಾಯದ ಸ್ಥಿತಿಗತಿಯಲ್ಲಿ ಗಮನಾರ್ಹ ಬದಲಾವಣೆಯೇನೂ ಆಗಿಲ್ಲ ಎಂದು ಹೇಳಿದೆ.

ADVERTISEMENT

ಹೊಸದಾಗಿ ಪತ್ತೆಯಾಗಿರುವ ಬಿ.1.640.2 ಹೆಸರಿನ ರೂಪಾಂತರಿಯನ್ನು ಗಮನಿಸಲಾಗುತ್ತಿದೆ. ಇದು, ತೀವ್ರವಾಗಿ ಹರಡಲಿದೆ ಎಂಬುದಕ್ಕೆ ಯಾವುದೇ ನಿದರ್ಶನಗಳಿಲ್ಲ. ಇದು, ಸದ್ಯ ಗಂಭೀರವಾಗಿ ಪರಿಗಣಿಸಬೇಕಾದ ತಳಿಯಲ್ಲ. ಭಾರತದಲ್ಲಿ ಇಂಥ ತಳಿಯ ಪ್ರಕರಣಗಳು ಪತ್ತೆಯಾಗಿಲ್ಲ. ಐಎನ್‌ಎಸ್‌ಎಸಿಒಜಿ ಇದುವರೆಗೂ ಒಟ್ಟು 1,50,710 ಮಾದರಿಗಳನ್ನು ವಂಶವಾಹಿ ಅನುಕ್ರಮಣಿಕೆ ಪರೀಕ್ಷೆಗೆ ಪರಿಗಣಿಸಿದ್ದು, 1,27,697 ಮಾದರಿಗಳ ಪರೀಕ್ಷೆಯನ್ನು ಪೂರ್ಣಗೊಳಿಸಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.