ADVERTISEMENT

‘ಅಗ್ನಿಪಥ’ಕ್ಕೆ ವಿರೋಧ: ಸಿಕಂದರಾಬಾದ್‌ನಲ್ಲಿ ಗೋಲಿಬಾರ್‌ಗೆ ಒಬ್ಬ ಬಲಿ

ಪ್ರತಿರೋಧ ಹಲವೆಡೆ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2022, 19:49 IST
Last Updated 17 ಜೂನ್ 2022, 19:49 IST
ಕೇಂದ್ರದ ಅಗ್ನಿಪಥ ಯೋಜನೆ ವಿರುದ್ಧ ಪ್ರತಿಭಟಿಸಿದ ಗುಂಪೊಂದು ಲಖಿಸರಾಯ್‌ನಲ್ಲಿ ವಿಕ್ರಮಶಿಲಾ ಎಕ್ಸ್‌ಪ್ರೆಸ್ ರೈಲಿಗೆ ಶುಕ್ರವಾರ ಬೆಂಕಿ ಹಚ್ಚಿತು        –ಪಿಟಿಐ ಚಿತ್ರ
ಕೇಂದ್ರದ ಅಗ್ನಿಪಥ ಯೋಜನೆ ವಿರುದ್ಧ ಪ್ರತಿಭಟಿಸಿದ ಗುಂಪೊಂದು ಲಖಿಸರಾಯ್‌ನಲ್ಲಿ ವಿಕ್ರಮಶಿಲಾ ಎಕ್ಸ್‌ಪ್ರೆಸ್ ರೈಲಿಗೆ ಶುಕ್ರವಾರ ಬೆಂಕಿ ಹಚ್ಚಿತು –ಪಿಟಿಐ ಚಿತ್ರ   

ಸಿಕಂದರಾಬಾದ್‌/ನವದೆಹಲಿ/ಕೋಲ್ಕತ್ತ: ರಕ್ಷಣಾ ಪಡೆಗಳಲ್ಲಿ ನಾಲ್ಕು ವರ್ಷಗಳ ಅಲ್ಪಾವಧಿ ನೇಮಕಾತಿಯ ‘ಅಗ್ನಿಪಥ’ ಯೋಜನೆ ವಿರುದ್ಧದ ಪ್ರತಿಭಟನೆ ತೀವ್ರಗೊಂಡಿದೆ ಮತ್ತು ಹಲವು ರಾಜ್ಯಗಳಿಗೆ ವ್ಯಾಪಿಸಿದೆ. ತೆಲಂಗಾಣದ ಸಿಕಂದರಾಬಾದ್‌ ರೈಲು ನಿಲ್ದಾಣಕ್ಕೆ ಶುಕ್ರವಾರ ನುಗ್ಗಿದ ಪ್ರತಿಭಟನಕಾರರು ಕೆಲವು ರೈಲುಗಳ ಬೋಗಿಗಳಿಗೆ ಬೆಂಕಿ ಇಟ್ಟಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಸೊತ್ತುಗಳನ್ನು ಹಾಳುಗೆಡವಿದ್ದಾರೆ. ಪ್ರತಿಭಟನೆಗೆ ಬೆದರಿದ ಪ್ರಯಾಣಿಕರು ದಿಕ್ಕಾಪಾಲಾಗಿ ಓಡಿದ್ದಾರೆ. ಗುಂಪು ಚದುರಿಸಲು ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ.

ಮಧ್ಯ ‍ಪ್ರದೇಶದ ಇಂದೋರ್‌ನಲ್ಲಿ ನೂರಾರು ಪ್ರತಿಭಟನಕಾರರು ರೈಲು ನಿಲ್ದಾಣದ ಸಮೀಪ ರೈಲು ತಡೆ ನಡೆಸಿದರು. ಪ್ರತಿಭಟನೆಯು ಹಿಂಸೆಗೆ ತಿರುಗಿತು. ಪ್ರತಿಭಟನಕಾರರ ಕಲ್ಲುತೂರಾಟದಿಂದ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಇಲ್ಲಿ 15 ಮಂದಿಯನ್ನು ಬಂಧಿಸಲಾಗಿದೆ.

ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಬುಧವಾರ ಆರಂಭಗೊಂಡ ಪ್ರತಿಭಟನೆಯು ಶುಕ್ರವಾರದ ಹೊತ್ತಿಗೆ ಒಡಿಶಾ, ಪಶ್ಚಿಮ ಬಂಗಾಳ, ತೆಲಂಗಾಣ ಮತ್ತು ಇತರ ರಾಜ್ಯಗಳಿಗೂ ವ್ಯಾಪಿಸಿದೆ. ಬಿಹಾರ ಉಪಮುಖ್ಯಮಂತ್ರಿ ರೇಣು ದೇವಿ, ಬಿಹಾರ ಬಿಜೆಪಿ ಘಟಕದ ಅಧ್ಯಕ್ಷ ಸಂಜಯ್ ಜೈಸ್ವಾಲ್‌ ಅವರ ನಿವಾಸ ಮತ್ತು ಬಿಜೆಪಿ ಶಾಸಕರೊಬ್ಬರ ಕಾರಿನ ಮೇಲೆ ಪ್ರತಿಭಟನಕಾರರು ದಾಳಿ ನಡೆಸಿದ್ದಾರೆ. ರಾಜ್ಯದ ವಿವಿಧೆಡೆ ರೈಲ್ವೆ ಸೊತ್ತುಗಳ ಜತೆಗೆ, ಸರ್ಕಾರದ ಇತರ ಸೊತ್ತುಗಳನ್ನೂ ಪ್ರತಿಭಟನಕಾರರು ಧ್ವಂಸ ಮಾಡಿದ್ದಾರೆ.

ADVERTISEMENT

ತಮ್ಮ ನಿವಾಸದ ಮೇಲೆ ದಾಳಿ ನಡೆಸಿದವರು ರಕ್ಷಣಾ ಪಡೆಗಳ ಉದ್ಯೋಗಾಕಾಂಕ್ಷಿಗಳಲ್ಲ, ಅವರೆಲ್ಲರೂ ವಿರೋಧ ಪಕ್ಷಗಳು ಉತ್ತೇಜಿಸಿ ಕಳುಹಿಸಿದ ಗೂಂಡಾಗಳು ಎಂದು ರೇಣು ದೇವಿ ಹೇಳಿದ್ದಾರೆ. ಜೈಸ್ವಾಲ್‌ ಅವರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಮ್ಮ ನಿವಾಸದ ಕಟ್ಟಡವನ್ನು ಸ್ಫೋಟಿಸುವುದು ಅವರ ಉದ್ದೇಶವಾಗಿತ್ತು. ದಾಳಿ ನಡೆಸಿದ ಹಲವರನ್ನು ಗುರುತಿಸಿದ್ದೇನೆ ಎಂದು ಜೈಸ್ವಾಲ್‌ ಅವರು ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿಯೂ ಆಕ್ರೋಶ ತೀವ್ರಗೊಂಡಿದೆ. ಕೇಂದ್ರ ಸಚಿವ ಶಂತನು ಠಾಕೂರ್‌ ಅವರ ಮನೆಗೆ ನುಗ್ಗಲು ಪ್ರತಿಭಟನಕಾರರು ಯತ್ನಿಸಿದ್ದಾರೆ. ಒಡಿಶಾದ ಕಂಟೋನ್ಮೆಂಟ್‌ ಪ್ರದೇಶದಲ್ಲಿಯೂ ಪ್ರತಿಭಟನೆ ನಡೆದಿದೆ.

ಪಟ್ನಾ ಹೊರವಲಯದಲ್ಲಿರುವ ದೀದಾರ್‌ಗಂಜ್‌ ಟೋಲ್‌ ಕೇಂದ್ರವನ್ನು ಧ್ವಂಸಗೊಳಿಸಲಾಗಿದೆ. ನವಾಡದಲ್ಲಿ ಪೊಲೀಸ್‌ ಜೀಪ್‌ಗೆ ಬೆಂಕಿ ಹಚ್ಚಲಾಗಿದೆ.

200 ರೈಲು ರದ್ದು, 7 ರೈಲುಗಳಿಗೆ ಹಾನಿ

ಅಗ್ನಿಪಥ ಯೋಜನೆಯ ವಿರುದ್ಧ ದೇಶದ ವಿವಿಧ ಭಾಗಗಳಲ್ಲಿ ನಡೆದ ಪ್ರತಿಭಟನೆಯಿಂದಾಗಿ ರೈಲ್ವೆ ಇಲಾಖೆಯು 200ಕ್ಕೂ ಹೆಚ್ಚು ರೈಲುಗಳನ್ನು ರದ್ದು ಮಾಡಿದೆ. ಏಳು ರೈಲುಗಳ ಬೋಗಿಗಳನ್ನು ಪ್ರತಿಭಟನಕಾರರು ಸುಟ್ಟಿದ್ದಾರೆ. ಇವುಗಳ ಪೈಕಿ, ಸಂಚರಿಸುತ್ತಿದ್ದ ಮೂರು ರೈಲುಗಳನ್ನು ನಿಲ್ಲಿಸಿ ಬೆಂಕಿ ಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಹಾರ ಮತ್ತು ಉತ್ತರ ಪ್ರದೇಶದ ಪೂರ್ವ ಭಾಗಕ್ಕೆ ಸಂಚರಿಸುವ ಎಲ್ಲ ರೈಲುಗಳನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ. ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳನ್ನು ಒಳಗೊಂಡ ಪೂರ್ವ ಕೇಂದ್ರ ರೈಲ್ವೆ ವಿಭಾಗದಲ್ಲಿ ಹೆಚ್ಚಿನ ಹಾನಿ ಉಂಟಾಗಿದೆ.

2 ದಿನದಲ್ಲಿ ನೇಮಕಾತಿ ಪ್ರಕ್ರಿಯೆ

ಅಗ್ನಿಪಥ ಯೋಜನೆ ಅಡಿ ಸೈನಿಕರ ನೇಮಕಾತಿ ಪ್ರಕ್ರಿಯೆಯನ್ನು ಭೂಸೇನೆಯು ಎರಡು ದಿನಗಳಲ್ಲಿ ಆರಂಭಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಧಿಸೂಚನೆಯ ಬಳಿಕ, ಸೇನೆಯ ವಿವಿಧ ಘಟಕಗಳು ನೇಮಕಾತಿ ಪ್ರಕ್ರಿಯೆಯ ವಿವರಗಳನ್ನು ಪ್ರಕಟಿಸಲಿವೆ. ಖಾಲಿ ಇರುವ ಹುದ್ದೆಗಳ ಸಂಖ್ಯೆ, ನೇಮಕಾತಿ ಕೇಂದ್ರಗಳು, ಪರೀಕ್ಷಾ ವೇಳಾಪಟ್ಟಿ ಮತ್ತು ಇತರ ಮಾಹಿತಿ ಪ್ರಕಟವಾಗಲಿದೆ.

ಹೊಸದಾಗಿ ನೇಮಕಗೊಂಡವರಿಗೆ ಇದೇ ಡಿಸೆಂಬರ್ ಹೊತ್ತಿಗೆ ತರಬೇತಿ ಆರಂಭವಾಗಬೇಕು ಮತ್ತು 2023ರ ಜೂನ್‌ಗೆ ಅವರು ಸೇನೆಗೆ ಸೇರ್ಪಡೆಯಾಗಬೇಕು ಎಂಬ ಗುರಿ ಇರಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೌಕಾ ಪಡೆ ಮತ್ತು ವಾಯು ಪಡೆ ಕೂಡ ನೇಮಕಾತಿ ಪ್ರಕ್ರಿಯೆಯನ್ನು ಮುಂದಿನ ವಾರ ಆರಂಭಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.