ADVERTISEMENT

AI ವಿಮಾನ ಪತನಕ್ಕೆ ಒಂದು ತಿಂಗಳು: ಲಂಡನ್‌ಗೆ ಪ್ರಯಾಣಿಸುವ ಪ್ರಯಾಣಿಕರಲ್ಲಿ ಆತಂಕ

ಪಿಟಿಐ
Published 12 ಜುಲೈ 2025, 15:25 IST
Last Updated 12 ಜುಲೈ 2025, 15:25 IST
   

ಅಹಮದಾಬಾದ್‌: ಅಹಮದಾಬಾದ್‌–ಲಂಡನ್‌ ಏರ್‌ಇಂಡಿಯಾ ವಿಮಾನವು ಪತನಗೊಂಡು ಜುಲೈ 12ಕ್ಕೆ ಒಂದು ತಿಂಗಳು ಪೂರ್ಣಗೊಂಡಿದೆ. ಈ ಮಾರ್ಗದಲ್ಲಿ ಶನಿವಾರ ಪ್ರಯಾಣ ಬೆಳೆಸಿದ್ದ ಹಲವರು ಘಟನೆಯನ್ನು ನೆನೆದು ಆತಂಕ ವ್ಯಕ್ತಪಡಿಸಿದರು.

ಡ್ರೀಮ್‌ಲೈನರ್‌ ವಿಮಾನವು ಪತನಗೊಂಡು ಬಿಜೆ ವೈದ್ಯಕೀಯ ಕಾಲೇಜಿನ ಮೇಲೆ ಬಿದ್ದ ಪರಿಣಾಮ ವಿಮಾನದಲ್ಲಿದ್ದ 241 ಮಂದಿ ಹಾಗೂ ಘಟನಾ ಸ್ಥಳದಲ್ಲಿದ್ದ 19 ಮಂದಿ ಮೃತಪಟ್ಟಿದ್ದರು. ದುರಂತದ ಬಳಿಕ ಈ ಮಾರ್ಗದ ವಿಮಾನದ ಕೋಡ್‌ ಅನ್ನು ಎಐ–171 ಬದಲಾಗಿ ಎಐ–159 ಎಂದು ಬದಲಿಸಲಾಗಿದೆ.

ಶನಿವಾರ ಈ ಮಾರ್ಗದಲ್ಲಿ ಪ್ರಯಾಣಿಸಲು ಟಿಕೆಟ್‌ ಕಾಯ್ದಿರಿಸಿದ್ದ ಪ್ರಯಾಣಿಕರು ಮತ್ತು ಅವರ ಕುಟುಂಬಸ್ಥರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ತಿಂಗಳ ಹಿಂದೆ ಇದೇ ದಿನ ನಡೆದ ದುರಂತವನ್ನು ನೆನೆದು ಹಲವರ ಕಣ್ಣುಗಳಲ್ಲಿ ಭಯ, ಆತಂಕ ಮನೆ ಮಾಡಿತ್ತು.

ADVERTISEMENT

ಭಾರತಿಬೆನ್‌ ಪ್ರಜಾಪತಿ ಮತ್ತು ರಾಜೇಶ್‌ ಪ್ರಜಾಪತಿ ಅವರು, ತವರಿಗೆ ಬಂದಿದ್ದ ಮಗಳು ಧಾತ್ರಿ ಅವರನ್ನು ಲಂಡನ್‌ಗೆ ಕಳುಹಿಸಲು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ‘ಒಂದು ತಿಂಗಳ ಹಿಂದೆ ದುರಂತಕ್ಕೀಡಾದ ವಿಮಾನದ ಮಾರ್ಗದಲ್ಲಿಯೇ ನಮ್ಮ ಮಗಳು ಲಂಡನ್‌ಗೆ ಪ್ರಯಾಣಿಸುತ್ತಿದ್ದಾಳೆ. ಹೀಗಾಗಿ ಸ್ವಲ್ಪ ಆತಂಕವಾಗುತ್ತಿದೆ. ಆದರೆ ಹಣೆಬರಹವನ್ನು ಬದಲಿಸಲು ಸಾಧ್ಯವಿಲ್ಲ. ನಮ್ಮ ಮಗಳು ಸುರಕ್ಷಿತವಾಗಿ ತಲುಪುತ್ತಾಳೆ ಎಂಬ ವಿಶ್ವಾಸವಿದೆ’ ಎಂದು ಭಾರತಿಬೆನ್‌ ಹೇಳಿದರು.

ಭಾವನಗರ ನಿವಾಸಿ ಗಜಾನಂದ ಪಾಂಡ್ಯ ಅವರು, ಮಗಳು, ಅಳಿಯ ಮತ್ತು ಮೊಮ್ಮಗಳನ್ನು ಲಂಡನ್‌ಗೆ ಕಳುಹಿಸಲು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಮೂರು ಗಂಟೆ ಕಾದು ವಿಮಾನವು ಟೇಕ್‌–ಆಫ್‌ ಆದ ನಂತರವೇ ಅವರು ಮನೆಗೆ ವಾಪಸಾದರು.

‘ವಿಮಾನ ದುರಂತ ಅತ್ಯಂತ ಅಪರೂಪ ಎಂದು ತಿಳಿದಿದ್ದರೂ ಸ್ವಲ್ಪಮಟ್ಟಿಗೆ ತಳಮಳ ಇತ್ತು’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.