ADVERTISEMENT

Online Gaming Bill 2025: ಲೋಕಸಭೆಯಲ್ಲಿ ಆನ್‌ಲೈನ್ ಗೇಮಿಂಗ್ ಮಸೂದೆ ಅಂಗೀಕಾರ

ವಿರೋಧ ಪಕ್ಷಗಳ ಸಂಸದರಿಂದ ಪ್ರತಿಭಟನೆ

ಪಿಟಿಐ
Published 20 ಆಗಸ್ಟ್ 2025, 13:03 IST
Last Updated 20 ಆಗಸ್ಟ್ 2025, 13:03 IST
<div class="paragraphs"><p>ಲೋಕಸಭೆಯಲ್ಲಿ ಸಚಿವ ಅಶ್ವಿನಿ ವೈಷ್ಣವ್‌ ಮಾತನಾಡಿದರು&nbsp; </p></div>

ಲೋಕಸಭೆಯಲ್ಲಿ ಸಚಿವ ಅಶ್ವಿನಿ ವೈಷ್ಣವ್‌ ಮಾತನಾಡಿದರು 

   

ಪಿಟಿಐ ಚಿತ್ರ

ನವದೆಹಲಿ: ಹಣ ಕಟ್ಟಿ ಆಡಲಾಗುವ ಆನ್‌ಲೈನ್‌ ಗೇಮ್‌ಗಳನ್ನು ನಿಷೇಧಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಬುಧವಾರ ಅಂಗೀಕರಿಸಲಾಯಿತು.

ADVERTISEMENT

ಆನ್‌ಲೈನ್‌ ಗೇಮ್‌ ಆಡುವುದನ್ನು ವ್ಯಸನವನ್ನಾಗಿ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಆನ್‌ಲೈನ್‌ ಗೇಮಿಂಗ್‌ ಆ್ಯಪ್‌ಗಳ ಮೂಲಕ ಹಣ ಅಕ್ರಮ ವರ್ಗಾವಣೆ ಹಾಗೂ ಹಣಕಾಸು ವಂಚನೆ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಮಸೂದೆ ಸಿದ್ಧಪಡಿಸಿದೆ.

ಮಧ್ಯಾಹ್ನ ಕಲಾಪ ಆರಂಭಗೊಂಡಾಗ, ಬಿಹಾರದಲ್ಲಿ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್‌) ಕುರಿತು ಚರ್ಚೆಗೆ ಅವಕಾಶ ನೀಡುವಂತೆ ವಿರೋಧ ಪಕ್ಷಗಳ ಸದಸ್ಯರು ಬೇಡಿಕೆ ಮುಂದಿಟ್ಟರು. 

ಸ್ಪೀಕರ್‌ ಇದಕ್ಕೆ ಅವಕಾಶ ನೀಡದಿದ್ದಾಗ, ವಿಪಕ್ಷಗಳ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲು ಆರಂಭಿಸಿದರು. ವಿಪಕ್ಷಗಳ ಸದಸ್ಯರು ಪ್ರತಿಭಟನೆ ಆರಂಭಿಸಿದಾಗ, ಧ್ವನಿಮತದ ಮೂಲಕ ಮಸೂದೆಯನ್ನು ಅಂಗೀಕರಿಸಲಾಯಿತು. ನಂತರ, ದಿನದಮಟ್ಟಿಗೆ ಸದನವನ್ನು ಮುಂದೂಡಲಾಯಿತು.

‘ಕಳವಳಕಾರಿ ಸಂಗತಿ’: ‘ಆನ್‌ಲೈನ್‌ ಗೇಮಿಂಗ್ (ಉತ್ತೇಜನ ಮತ್ತು ನಿಯಂತ್ರಣ) ಮಸೂದೆ,2025’ ಅನ್ನು ಮಂಡಿಸಿ ಮಾತನಾಡಿದ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಮಸೂದೆಯಲ್ಲಿನ ಅವಕಾಶಗಳ ಕುರಿತು ಸದನಕ್ಕೆ ಸಂಕ್ಷಿಪ್ತ ಮಾಹಿತಿ ನೀಡಿದರು.

‘ಹಣ ಬಳಸಿ ಆನ್‌ಲೈನ್‌ ಗೇಮ್‌ಗಳನ್ನು ಆಡುವುದು ಹೆಚ್ಚುತ್ತಿದ್ದು, ಇದು ಕಳವಳಕಾರಿ ಸಂಗತಿ. ಈ ಗೇಮ್‌ಗಳನ್ನು ಆಡುವುದು ಒಂದು ವ್ಯಸನವಾಗುತ್ತಿದೆ. ವಂಚನೆಗೂ ಈ ವೇದಿಕೆಗಳನ್ನು ಬಳಸಲಾಗುತ್ತಿದೆ’ ಎಂದು ಹೇಳಿದರು. ಆಗ, ವಿಪಕ್ಷಗಳ ಸದಸ್ಯರು ತಮ್ಮ ಬೇಡಿಕೆ ಮುಂದಿಟ್ಟುಕೊಂಡು ಪ್ರತಿಭಟಿಸಲು ಆರಂಭಿಸಿದರು.

‘ಆನ್‌ಲೈನ್‌ ಗೇಮ್‌ಗಳು ನೂರಾರು ಕುಟುಂಬಗಳ ನಾಶಕ್ಕೆ ಕಾರಣವಾಗಿವೆ. ಯುವ ಜನತೆಯ ಭವಿಷ್ಯವನ್ನು ಹಾಳುಮಾಡಿವೆ. ಹೀಗಾಗಿ, ಮಸೂದೆ ಕುರಿತ ಚರ್ಚೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ವಿಪಕ್ಷಗಳ ಸದಸ್ಯರಿಗೆ ಸ್ಪೀಕರ್‌ ಓಂ ಬಿರ್ಲಾ ಮನವಿ ಮಾಡಿದರು.

ವಿರೋಧ ಪಕ್ಷಗಳ ಸಂಸದರು ಪ್ರತಿಭಟನೆ ಮುಂದುವರಿಸಿ, ಘೋಷಣೆಗಳನ್ನು ಕೂಗಿದರು. ಆಗ, ಮಸೂದೆಯನ್ನು ಧ್ವನಿಮತದ ಮೂಲಕ ಅಂಗೀಕರಿಸಿ, ಸದನವನ್ನು ಮುಂದೂಡಲಾಯಿತು.

‘ಆನ್‌ಲೈನ್‌ ಗೇಮಿಂಗ್‌ ಉದ್ಯಮಕ್ಕೆ ಪೆಟ್ಟು’

ಮುಂಬೈ: ಆನ್‌ಲೈನ್‌ ಗೇಮ್‌ಗಳನ್ನು ನಿಷೇಧಿಸುವ ಮಸೂದೆಯನ್ನು ಲೋಕಸಭೆಯು ಅಂಗೀಕರಿಸಿದ್ದು ಇದು ಕೋಟ್ಯಂತರ ರೂಪಾಯಿ ವಹಿವಾಟು ಒಳಗೊಂಡ ಆನ್‌ಲೈನ್‌ ಗೇಮಿಂಗ್‌ ಉದ್ಯಮಕ್ಕೆ ಅಪಾಯ ತಂದೊಡ್ಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಆನ್‌ಲೈನ್‌ ಪೋಕರ್‌ ವೇದಿಕೆಗಳು ಮನರಂಜನೆ ಉದ್ದೇಶದಿಂದ ದೇಶೀಯವಾಗಿಯೇ ಅಭಿವೃದ್ಧಿಪಡಿಸಲಾಗಿರುವ ಕ್ರಿಕೆಟ್ ಆಟಕ್ಕೆ ಸಂಬಂಧಿಸಿದ ಆ್ಯಪ್‌ಗಳು ಹಾಗೂ ಐಪಿಎಲ್‌ ಪ್ರಾಯೋಜಕತ್ವ ಹೊಂದಿರುವ ಆ್ಯಪ್‌ಗಳು ಇವೆ. ಈ ಆ್ಯಪ್‌ಗಳ ಮೂಲಕ ನಡೆಯುವ ವ್ಯವಹಾರದ ಮೇಲೆ ಪರಿಣಾಮ ಉಂಟಾಗಲಿದೆ ಎನ್ನಲಾಗುತ್ತಿದೆ. ಈ ಉದ್ಯಮದಲ್ಲಿ ತೊಡಗಿರುವ ಸಂಸ್ಥೆಗಳು ಮಸೂದೆಗೆ ವಿರೋಧ ವ್ಯಕ್ತಪಡಿಸಿವೆ.

‘ಭಾರತ ಮೂಲದ ಈ ಆನ್‌ಲೈನ್‌ ಗೇಮಿಂಗ್‌ ವೇದಿಕೆಗಳನ್ನು ನಿಷೇಧಿಸಿದಲ್ಲಿ ಆನ್‌ಲೈನ್‌ ಗೇಮ್‌ ಆಡುವ ಕೋಟ್ಯಂತರ ಜನರು ವಿದೇಶಗಳ ಜೂಜಾಟದ ವೆಬ್‌ಸೈಟ್‌ ಹಾಗೂ ಅನಿಯಂತ್ರಿತ ವೇದಿಕೆಗಳತ್ತ ಆಕರ್ಷಿತರಾಗುವ ಅಪಾಯ ಇದೆ’ ಎಂದು ಅಖಿಲ ಭಾರತ ಗೇಮಿಂಗ್‌ ಒಕ್ಕೂಟ ಮತ್ತು ಭಾರತೀಯ ಮನರಂಜನಾ ಕ್ರೀಡೆಗಳ ಮಹಾಒಕ್ಕೂಟ ಹೇಳಿದೆ.

ಪ್ರಮುಖ ಅಂಶಗಳು

  • ಆನ್‌ಲೈನ್‌ ಬೆಟ್ಟಿಂಗ್‌ನಂತಹ ಚಟುವಟಿಕೆಗಳನ್ನು ನಿಷೇಧಿಸುವುದು ಅವುಗಳ ಕಾರ್ಯಾಚರಣೆ ಉತ್ತೇಜಿಸುವುದು ಹಾಗೂ ಜಾಹೀರಾತು ಪ್ರಕಟಿಸುವುದನ್ನು ನಿಷೇಧಿಸುವ ಅವಕಾಶಗಳನ್ನು ಮಸೂದೆ ಒಳಗೊಂಡಿದೆ

  • ಮನರಂಜನಾ ಕ್ರೀಡೆಗಳಿಂದ ಹಿಡಿದು ಆನ್‌ಲೈನ್‌ ಜೂಜಾಟ (ಪೋಕರ್ ರಮ್ಮಿ ಮತ್ತು ಇಸ್ಪೀಟ್‌ ಕಾರ್ಡ್‌ಗಳನ್ನು ಒಳಗೊಂಡ ಆಟಗಳು) ಹಾಗೂ ಆನ್‌ಲೈನ್‌ ಲಾಟರಿಗಳನ್ನು ನಿಷೇಧಿಸುವ ಅವಕಾಶಗಳಿವೆ

  • ಹಣ ಕಟ್ಟಿ ಆಡುವ ಆಟಗಳ ಕುರಿತು ಜಾಹೀರಾತು ಪ್ರಕಟಿಸಿದಲ್ಲಿ 2 ವರ್ಷಗಳವರೆಗೆ ಜೈಲು ಮತ್ತು ₹50 ಲಕ್ಷ ವರೆಗೆ ದಂಡ ಅಥವಾ ಎರಡೂ ಶಿಕ್ಷೆ ವಿಧಿಸಲು ಅವಕಾಶ ಇದೆ

  • ಆನ್‌ಲೈನ್‌ ಗೇಮ್‌ ಆಡುವುದಕ್ಕೆ ಅವಕಾಶ ನೀಡುವವರಿಗೆ/ಪ್ರೋತ್ಸಾಹ ನೀಡುವವರಿಗೆ ಗರಿಷ್ಠ 3 ವರ್ಷ ಜೈಲುಶಿಕ್ಷೆ ಅಥವಾ ₹1 ಕೋಟಿ ವರೆಗೆ ದಂಡ ಇಲ್ಲವೇ ಎರಡನ್ನೂ ವಿಧಿಸಬಹುದಾಗಿದೆ 

  • ಅಪರಾಧಗಳ ಪುನರಾವರ್ತನೆ ಕಂಡುಬಂದಲ್ಲಿ 3–5 ವರ್ಷ ಜೈಲು ಮತ್ತು ₹2 ಕೋಟಿ ವರೆಗೆ ದಂಡ ವಿಧಿಸಬಹುದಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.