ಚುನಾವಣೆ ಪ್ರಾತಿನಿಧಿಕ ಚಿತ್ರ ಹಾಗೂ ಕೆ. ಅಣ್ಣಾಮಲೈ (ಪಿಟಿಐ)
ಬೆಂಗಳೂರು: 'ಒಂದು ರಾಷ್ಟ್ರ, ಒಂದು ಚುನಾವಣೆ' (ಒಎನ್‌ಒಇ) ಯೋಜನೆಯು ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ನೆಲೆಯಲ್ಲಿ ಯೋಚಿಸುವಂತೆ ಮಾಡುತ್ತದೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಶುಕ್ರವಾರ ಹೇಳಿದ್ದಾರೆ.
ನಗರದಲ್ಲಿ ಸಂವಾದದಲ್ಲಿ ಪಾಲ್ಗೊಂಡ ಅವರು, ಹೆಚ್ಚಿನ ಯುವ ಮತದಾರರು ಮತದಾನದಲ್ಲಿ ಪಾಲ್ಗೊಳ್ಳುವಂತೆ ಒಎನ್‌ಒಇ ಆಕರ್ಷಿಸುವ ಸಾಧ್ಯತೆ ಇದೆ ಎಂದಿದ್ದಾರೆ.
'ಸದ್ಯದ ವ್ಯವಸ್ಥೆಯಲ್ಲಿ, ಒಂದಾದ ನಂತರ ಒಂದು ಚುನಾವಣೆಗಳನ್ನು ನಡೆಸುತ್ತಿದ್ದೇವೆ. ಇದು ಮತದಾರರನ್ನು, ಅದರಲ್ಲೂ ಯುವ ಮತದಾರರನ್ನು ಮತದಾನ ಪ್ರಕ್ರಿಯೆಯ ಬಗ್ಗೆಯೇ ನಿರುತ್ಸಾಹಗೊಳಿಸುತ್ತಿದೆ. ಇಡೀ ದೇಶಕ್ಕೆ ಒಂದೇ ಚುನಾವಣೆ ನಡೆದರೆ, ಎಲ್ಲರೂ ಭಾಗವಹಿಸುತ್ತಾರೆ' ಎಂದು ಪ್ರತಿಪಾದಿಸಿದ್ದಾರೆ.
ಒಎನ್‌ಒಇ ಚುನಾವಣಾ ವೆಚ್ಚಕ್ಕೆ ಕಡಿವಾಣ ಹಾಕಲಿದೆ ಎಂದೂ ಹೇಳಿರುವ ಅಣ್ಣಾಮಲೈ, 'ಈ ಯೋಜನೆ ಜಾರಿಯಾದರೆ ನಾವು ದೇಶದ ಜಿಡಿಪಿಗೆ ಸುಮಾರು ₹ 4.5 ಲಕ್ಷ ಕೋಟಿಯಷ್ಟು ಕೊಡುಗೆ ನೀಡಬಹುದು. ಇಷ್ಟು ಹಣ ಚುನಾವಣಾ ವೆಚ್ಚದಿಂದ ಉಳಿಯಲಿದೆ' ಎಂದು ತಿಳಿಸಿದ್ದಾರೆ.
'ಒಎನ್‌ಒಇ ಯೋಜನೆಯನ್ನು ಬಲವಂತವಾಗಿ ಹೇರುತ್ತಿಲ್ಲ' ಎಂದು ಒತ್ತಿ ಹೇಳಿರುವ ಅವರು, 'ಜನ ಕಲ್ಯಾಣದ ಹಿತದೃಷ್ಟಿಯಿಂದ ತೆಗೆದುಕೊಂಡಿರುವ ಕ್ರಮ ಇದಾಗಿದೆ' ಎಂದು ಸ್ಪಷ್ಟಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ, ಒಎನ್‌ಒಇ ಜಾಗೃತಿ ಸಮಿತಿ ರಾಜ್ಯ ಸಂಚಾಲಕ ನವೀನ್ ಶಿವಪ್ರಕಾಶ್, ಜೈನ್ ವಿಶ್ವವಿದ್ಯಾಲಯದ ಉಪಾಧ್ಯಕ್ಷ ರವೀಂದ್ರ ಭಂಡಾರಿ, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.