ಓಂ ಬಿರ್ಲಾ
– ಪಿಟಿಐ ಚಿತ್ರ
ಜೈಪುರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಗೆ ಪ್ರತೀಕಾರವಾಗಿ ಭಾರತ, ಉಗ್ರರ ನೆಲೆಗಳನ್ನು ಗುರಿಯಾಗಿಸಿ 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ನಡೆಸುವ ಮೂಲಕ ತಕ್ಕ ಉತ್ತರ ನೀಡಿತ್ತು. ಈ ನಡುವೆ ಪ್ರತಿಕ್ರಿಯಿಸಿರುವ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಈ ವಿಜಯವನ್ನು ದೇಶದ ಎಲ್ಲಾ ತಾಯಂದಿರು, ಸಹೋದರಿಯರು ಮತ್ತು ಮಗಳಿಗೆ ಸೇರಿದ್ದು ಎಂದು ಹೇಳಿದ್ದಾರೆ.
'ತಿರಂಗ ಯಾತ್ರೆ'ಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ವಿಜಯವನ್ನು ಪ್ರತಿಯೊಬ್ಬರು ನೆನಪಿಟ್ಟುಕೊಳ್ಳಬೇಕು. ಭಾರತದ ಪ್ರತಿಯೊಬ್ಬ ನಾಗರಿಕನ ಹೃದಯದಲ್ಲಿ ದೇಶಭಕ್ತಿಯ ಅಲೆ ಇದೆ ಎಂದು ತಿಳಿಸಿದ್ದಾರೆ.
'ಸ್ತ್ರೀ ಶಕ್ತಿ ದೇಶದ ಶಕ್ತಿಯಾಗಿ ಮಾರ್ಪಟ್ಟಿದೆ. ಇದು ನಮ್ಮ ಸೈನಿಕರಿಗೆ ಸ್ಫೂರ್ತಿ ನೀಡುತ್ತದೆ. ಆಪರೇಷನ್ ಸಿಂಧೂರದ ಸಾಧನೆಯನ್ನು ಸುವರ್ಣಾಕ್ಷರಗಳಲ್ಲಿ ಕೆತ್ತಲಾಗುವುದು' ಎಂದು ಬಿರ್ಲಾ ಹೇಳಿದ್ದಾರೆ.
ಈ ಕಾರ್ಯಾಚರಣೆಯು ಕೇವಲ ಮಿಲಿಟರಿ ಕಾರ್ಯತಂತ್ರಕ್ಕಿಂತ, ಗಡಿಗಳಲ್ಲಿ ಕಾವಲು ಕಾಯುವ ಯೋಧರ ಪತ್ನಿಯರ 'ಸಿಂಧೂರ'ವನ್ನು ರಕ್ಷಿಸುವ ಪ್ರತಿಜ್ಞೆಯಾಗಿತ್ತು ಎಂದು ಬಿರ್ಲಾ ತಿಳಿಸಿದ್ದಾರೆ.
ಆಪರೇಷನ್ ಸಿಂಧೂರ ಭಯೋತ್ಪಾದನೆಯ ವಿರುದ್ಧ ಭಾರತದ ನಿರ್ಣಾಯಕ ಹೋರಾಟವಾಗಿತ್ತು, ಭಯೋತ್ಪಾದನೆಯನ್ನು ಸಂಪೂರ್ಣವಾಗಿ ಬೇರುಸಹಿತ ಕಿತ್ತುಹಾಕುವವರೆಗೂ ಇದು ಮುಂದುವರಿಯುತ್ತದೆ ಎಂದು ಬಿರ್ಲಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.