ADVERTISEMENT

ಮಧ್ಯ ಪ್ರದೇಶ: ಬಯಲು ಶೌಚ ಮಾಡಿದ ದಲಿತ ಮಕ್ಕಳನ್ನು ಹೊಡೆದು ಸಾಯಿಸಿದರು! 

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 7:26 IST
Last Updated 27 ಸೆಪ್ಟೆಂಬರ್ 2019, 7:26 IST
ಅಪರಾಧ  (ಸಾಂದರ್ಭಿಕ ಚಿತ್ರ)
ಅಪರಾಧ (ಸಾಂದರ್ಭಿಕ ಚಿತ್ರ)   

ಭೋಪಾಲ್: ಮಧ್ಯ ಪ್ರದೇಶದ ಶಿವಪುರಿ ಜಿಲ್ಲೆಯ ಗ್ರಾಮವೊಂದರ ಬಯಲಿನಲ್ಲಿ ಶೌಚ ಮಾಡಿದ ಇಬ್ಬರು ಮಕ್ಕಳನ್ನು ಅಲ್ಲಿನಗ್ರಾಮದವರು ಹೊಡೆದು ಸಾಯಿಸಿದ ಪ್ರಕರಣ ವರದಿಯಾಗಿದೆ.

ಬುಧವಾರ ಬೆಳಗ್ಗೆ ಸಿರ್ಸೋದ್ ಗ್ರಾಮದಲ್ಲಿ ದಲಿತ ಕುಟುಂಬದ 10ರ ಹರೆಯದ ಬಾಲಕ ಮತ್ತು 12ರ ಹರೆಯದ ಬಾಲಕಿ ಬಯಲಿಗೆಬಹಿರ್ದಸೆಗಾಗಿ ಹೋಗಿದ್ದಾರೆ. ಆಗ ಅದೇ ಗ್ರಾಮದ ಹಕೀಮ್ ಯಾದವ್ ಮತ್ತು ರಾಮೇಶ್ವರ್ ಯಾದವ್ ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ.

ಮಕ್ಕಳು ಬಹಿರ್ದೆಸೆ ಮಾಡುತ್ತಿರುವ ಫೋಟೊಗಳನ್ನು ಮೊಬೈಲ್‌ನಲ್ಲಿ ಕ್ಲಿಕ್ಕಿಸಿದ ನಂತರ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದ ವಿಚಾರಣೆ ನಡೆಸಿದ್ದಾರೆ. ಈ ಹೊತ್ತಲ್ಲಿ ಆರೋಪಿಯೊಬ್ಬ ದುಷ್ಟ ಶಕ್ತಿಗಳನ್ನು ನಾಶ ಮಾಡುವಂತೆ ನನಗೆ ದೇವರು ಆದೇಶಿಸಿದ್ದರು. ಹಾಗಾಗಿ ನಾನು ಅವರನ್ನು ಹತ್ಯೆ ಮಾಡಿದೆ ಎಂದು ಪೊಲೀಸರಲ್ಲಿ ಹೇಳಿದ್ದಾನೆ.

ಬುಧವಾರ ಬೆಳಗ್ಗೆ ಪಂಚಾಯತ್ ಭವನದ ಬಳಿ ಇರುವ ಬಯಲಿನಲ್ಲಿ ಮಕ್ಕಳು ಶೌಚ ಮಾಡುತ್ತಿದ್ದರು. ಆಗ ಅಲ್ಲಿಗೆ ಬಂದ ಹಕೀಂ ಯಾದವ್ ಮತ್ತು ರಾಮೇಶ್ವರ್ ಯಾದವ್ ಮಕ್ಕಳನ್ನು ಬೆದರಿಸಿದ್ದಾರೆ. ಆಮೇಲೆ ಲಾಠಿಯಿಂದ ಮಕ್ಕಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಸಿರ್ಸೋಡ್ ಪೊಲೀಸ್ ಠಾಣೆಯ ಉಸ್ತುವಾರಿ ವಹಿಸಿರುವ ಆರ್.ಎಸ್. ಧಾಕಡ್ ಹೇಳಿದ್ದಾರೆ.

ಮಕ್ಕಳಿಬ್ಬರನ್ನು ಆಸ್ಪತ್ರೆಗೆ ಸಾಗಿಸಿದರೂ ಅಲ್ಲಿ ತಲುಪುವ ಹೊತ್ತಿಗೆ ಪ್ರಾಣ ಹೋಗಿತ್ತು ಎಂದಿದ್ದಾರೆ ಧಾಕಡ್ .

ಇದನ್ನೂ ಓದಿ:ಟೀಂ ಇಂಡಿಯಾ ಗೆಲುವಿಗೆ ಸಂಭ್ರಮಿಸಿದ ದಲಿತ ಯುವಕನನ್ನು ಕಿಚ್ಚಿಟ್ಟು ಕೊಂದರು!

ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 302ರಡಿಯಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಎಸ್‌ಪಿ ಶಿವಪುರಿ ರಾಜೇಶ್ ಚಂಡೇಲ್ ಹೇಳಿದ್ದಾರೆ .ಮೂಢನಂಬಿಕೆ ಅಥವಾ ಅಸ್ಪೃಶ್ಯತೆಯೇ ಮಕ್ಕಳ ಹತ್ಯೆಗೆ ಕಾರಣವಾಯಿತೇ ಎಂದು ಪೊಲೀಸರುತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.