ADVERTISEMENT

ಭಾರಿ ಹಣದೊಂದಿಗೆ ಸಿಕ್ಕ ಜಾರ್ಖಂಡ್‌ ಶಾಸಕರು: ಆಪರೇಷನ್‌ ಕಮಲ ಬಯಲು ಎಂದ ಕಾಂಗ್ರೆಸ್

ಪಿಟಿಐ
Published 31 ಜುಲೈ 2022, 2:12 IST
Last Updated 31 ಜುಲೈ 2022, 2:12 IST
ಪಶ್ಚಿಮ ಬಂಗಾಳದ ಹೌರಾದಲ್ಲಿ ತಡೆದು ನಿಲ್ಲಿಸಲಾಗಿರುವ ಜಾರ್ಖಂಡ್‌ನ ಕಾಂಗ್ರೆಸ್‌ ಶಾಸಕರ ಕಾರುಗಳು (ಪಿಟಿಐ ಚಿತ್ರ)
ಪಶ್ಚಿಮ ಬಂಗಾಳದ ಹೌರಾದಲ್ಲಿ ತಡೆದು ನಿಲ್ಲಿಸಲಾಗಿರುವ ಜಾರ್ಖಂಡ್‌ನ ಕಾಂಗ್ರೆಸ್‌ ಶಾಸಕರ ಕಾರುಗಳು (ಪಿಟಿಐ ಚಿತ್ರ)   

ನವದೆಹಲಿ: ಪಶ್ಚಿಮ ಬಂಗಾಳದ ಹೌರಾದಲ್ಲಿ ಕಾಂಗ್ರೆಸ್‌ನ ಮೂವರು ಶಾಸಕರು ಭಾರಿ ಪ್ರಮಾಣದ ಹಣದೊಂದಿಗೆ ಸಿಕ್ಕಿಬಿದ್ದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ಜಾರ್ಖಂಡ್‌ನಲ್ಲಿ ಬಿಜೆಪಿ ನಡೆಸುತ್ತಿರುವ ‘ಆಪರೇಷನ್ ಕಮಲ’ ಬಯಲಾಗಿದೆ ಎಂದಿದೆ.

ಜಾರ್ಖಂಡ್‌ನ ಮೂವರು ಕಾಂಗ್ರೆಸ್ ಶಾಸಕರನ್ನು ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಪೊಲೀಸರು ಶನಿವಾರ ರಾತ್ರಿ ತಡೆದು ನಿಲ್ಲಿಸಿದ್ದಾರೆ. ಅವರು ಸಂಚರಿಸುತ್ತಿದ್ದ ವಾಹನದಲ್ಲಿ ಭಾರಿ ಮೊತ್ತದ ಹಣ ಇದ್ದ ಕಾರಣಕ್ಕೆ ಅವರನ್ನು ತಡೆಯಲಾಗಿದೆ. ₹48 ಲಕ್ಷ ಹಣ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದರು.

ಜಾರ್ಖಂಡ್‌ನಲ್ಲಿ ಬಿಜೆಪಿ ತನ್ನ ಶಾಸಕರನ್ನು ಸೆಳೆಯುವ ಮೂಲಕ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಲೆ ಬರುತ್ತಿದೆ.

ADVERTISEMENT

ಜಾರ್ಖಂಡ್‌ನಲ್ಲಿ ಹೇಮಂತ್‌ ಸೊರೆನ್‌ ಅವರ ಜೆಎಂಎಂ, ಕಾಂಗ್ರೆಸ್‌ ಮತ್ತು ಲಾಲು ಪ್ರಸಾದ್ ಯಾದವ್ ಅವರ ಆರ್‌ಜೆಡಿ ಪಕ್ಷಗಳು ಸಮ್ಮಿಶ್ರ ಸರ್ಕಾರ ನಡೆಸುತ್ತಿವೆ.

‘ಜಾರ್ಖಂಡ್‌ನಲ್ಲಿ ಬಿಜೆಪಿ ನಡೆಸುತ್ತಿರುವ 'ಆಪರೇಷನ್ ಕಮಲ' ಹೌರಾದಲ್ಲಿ ಬಹಿರಂಗವಾಗಿದೆ. ಮಹಾರಾಷ್ಟ್ರದಲ್ಲಿ ಇ.ಡಿ ಮೂಲಕ ಕಾರ್ಯಗತಗೊಳಿಸಿದ ಯೋಜನೆಯನ್ನೇ ದೆಹಲಿಯಲ್ಲಿರುವ 'ಹಮ್ ದೋ (ನಾವಿಬ್ಬರು)' ಜಾರ್ಖಂಡ್‌ನಲ್ಲಿ ಮಾಡುತ್ತಿದ್ದಾರೆ’ ಎಂದು ಕಾಂಗ್ರೆಸ್‌ನ ರಾಜ್ಯಸಭಾ ಸಂಸದ ಜೈರಾಮ್ ರಮೇಶ್ ಟ್ವಿಟರ್‌ನಲ್ಲಿ ಮಾರ್ಮಿಕವಾಗಿ ಹೇಳಿದ್ದಾರೆ.

ಶಾಸಕರಾದ ಇರ್ಫಾನ್‌ ಅನ್ಸಾರಿ, ರಾಜೇಶ್‌ ಕಚ್ಚಪ್‌ ಮತ್ತು ನಮನ್‌ ಬಿಕ್ಸಲ್‌ ಕೊಂಗರಿ ಅವರು ಸಂಚರಿಸುತ್ತಿದ್ದ ವಾಹನದಲ್ಲಿ ಭಾರಿ ಮೊತ್ತದ ಹಣ ಇದೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಹಾಗಾಗಿ, ರಾಷ್ಟ್ರೀಯ ಹೆದ್ದಾರಿ 16ರ ರಾಣಿಹತಿ ಬಳಿ ತಡೆಯಲಾಗಿದೆ. ಎಣಿಕೆ ಯಂತ್ರಗಳನ್ನು ತಂದು ನೋಟುಗಳನ್ನು ಎಣಿಸಲಾಗುವುದು. ಹಣದ ಮೂಲದ ಬಗ್ಗೆ ಶಾಸಕರನ್ನು ತನಿಖೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಹೌರಾದಲ್ಲಿ ಸಿಕ್ಕಿರುವ ಹಣವು, ಜಾರ್ಖಂಡ್‌ನ ಹೇಮಂತ್ ಸೊರೆನ್ ಸರ್ಕಾರವನ್ನು ಉರುಳಿಸಲು ಬಿಜೆಪಿ ನಡೆಸಿದ ಪಿತೂರಿಯ ಭಾಗವಾಗಿದೆ ಎಂದು ಜಾರ್ಖಂಡ್ ಕಾಂಗ್ರೆಸ್ ಘಟಕವೂ ಆರೋಪಿಸಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.