ಎ.ಪಿ ಸಿಂಗ್,ವಾಯುಪಡೆ ಮುಖ್ಯಸ್ಥ
– ಪಿಟಿಐ ಚಿತ್ರ
ಹೈದರಾಬಾದ್: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ನಡೆಸಲಾದ 'ಆಪರೇಷನ್ ಸಿಂಧೂರ' ಭಾರತೀಯ ವಾಯುಪಡೆಯ ಅಪ್ರತಿಮ ಪರಾಕ್ರಮಕ್ಕೆ ಒಂದು ಉಜ್ವಲ ಸಾಕ್ಷಿಯಾಗಿದೆ ಎಂದು ಭಾರತೀಯ ವಾಯುಪಡೆಯ ( ಐಎಎಫ್) ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ ಸಿಂಗ್ ಶನಿವಾರ ಹೇಳಿದ್ದಾರೆ.
ಈ ಕಾರ್ಯಾಚರಣೆಯು ಶತ್ರುಗಳ ಮೇಲೆ ತ್ವರಿತ, ನಿಖರ ಮತ್ತು ನಿರ್ಣಾಯಕ ದಾಳಿ ಮಾಡುವ ನೀಡುವ ಐಎಎಫ್‌ನ ಸಾಮರ್ಥ್ಯವನ್ನು ತೋರ್ಪಡಿಸಿದೆ ಎಂದಿದ್ದಾರೆ.
ಹೈದರಾಬಾದ್ ಸಮೀಪದ ದುಂಡಿಗಲ್‌ನ ವಾಯುಪಡೆ ಅಕಾಡೆಮಿಯಲ್ಲಿ ನಡೆದ ಸಂಯೋಜಿತ ಪದವಿ ಪರೇಡ್‌ನಲ್ಲಿ (ಸಿಜಿಪಿ) ಮಾತನಾಡಿದ ಸಿಂಗ್, ಆಪರೇಷನ್ ಸಿಂಧೂರ ಸಶಸ್ತ್ರ ಪಡೆಗಳೊಳಗಿನ ಅಸಾಧಾರಣ ಸಮನ್ವಯ, ಶಕ್ತಿ ಮತ್ತು ಏಕೀಕರಣವನ್ನು ಪ್ರದರ್ಶಿಸಿದೆ ಎಂದು ಹೇಳಿದ್ದಾರೆ.
‘ಭಾರತದ ಪ್ರತಿಯೊಬ್ಬ ನಾಗರಿಕರು ಭಾರತೀಯ ವಾಯುಪಡೆಯ ಮೇಲೆ ಇಟ್ಟಿರುವ ನಂಬಿಕೆಗೆ ತಕ್ಕಂತೆ ಬದುಕುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ ಮತ್ತು ನಾವು ಇದಕ್ಕೆ ಸಿದ್ಧರಾಗಿರಬೇಕು ಮತ್ತು ಬದ್ಧರಾಗಿರಬೇಕು’ ಎಂದು ಅವರು ಹೇಳಿದ್ದಾರೆ.
ಯುದ್ಧಭೂಮಿ ಹೆಚ್ಚು ಹೆಚ್ಚು ಸಂಕೀರ್ಣವಾಗಲಿದೆ ಎಂದ ಅವರು, ಭವಿಷ್ಯದ ಸಂಘರ್ಷಗಳಲ್ಲಿ ಯಶಸ್ವಿಯಾಗಲು ಯುವ ಅಧಿಕಾರಿಗಳು ನಿರಂತರವಾಗಿ ತರಬೇತಿ ಪಡೆಯಬೇಕಾಗುತ್ತದೆ ಎಂದು ನುಡಿದಿದ್ದಾರೆ.
ಆರೋಗ್ಯಕರ ಜೀವನಶೈಲಿಯ ಮೂಲಕ ದೈಹಿಕ ಮತ್ತು ಮಾನಸಿಕ ಸದೃಢತೆ ಮತ್ತು ವ್ಯಕ್ತಿತ್ವ ವಿಕಸನದತ್ತ ಗಮನಹರಿಸಿ ಎಂದು ಅವರು ಇದೇ ವೇಳೆ ಕರೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.