
ನರೇಂದ್ರ ಮೋದಿ, ಭಾರತ ಪ್ರಧಾನಿ
– ರಾಯಿಟರ್ಸ್ ಚಿತ್ರ
ಧಾರ್(ಮಧ್ಯಪ್ರದೇಶ): ‘ಆಪರೇಷನ್ ಸಿಂಧೂರ’ ವೇಳೆ ಭಾರಿ ದಾಳಿ ನಡೆಸಿದ ನಮ್ಮ ಯೋಧರು ಕಣ್ಣು ಮಿಟುಕಿಸುವುದರೊಳಗೆ ಪಾಕಿಸ್ತಾನ ಭಾರತದ ಮುಂದೆ ಮಂಡಿಯೂರುವಂತೆ ಮಾಡಿದ್ದರು. ಇನ್ನೊಂದೆಡೆ, ತಮ್ಮವರ ದುಃಸ್ಥಿತಿ ಕಂಡು ಉಗ್ರರು ಕಣ್ಣೀರಿಡುತ್ತಿದ್ದುದನ್ನು ಈಗ ಜಗತ್ತೇ ನೋಡಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದರು.
ಧಾರ್ ಜಿಲ್ಲೆಯಲ್ಲಿ ‘ಪಿ.ಎಂ ಮಿತ್ರ ಪಾರ್ಕ್’ಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
‘ಮಂಗಳವಾರಷ್ಟೇ, ತಮಗಾದ ದುರ್ಗತಿ ನೆನೆದು ಪಾಕಿಸ್ತಾನದ ಭಯೋತ್ಪಾದಕರು ಅಳುತ್ತಿದ್ದುದನ್ನು ಭಾರತ ಹಾಗೂ ಜಗತ್ತೇ ನೋಡಿದೆ’ ಎಂದು ಜೈಷ್–ಎ–ಮೊಹ್ಮದ್ (ಜೆಇಎಂ) ಕಮಾಂಡರ್ ಹೇಳಿಕೆ ಇರುವ ವಿಡಿಯೊ ಕುರಿತು ಪರೋಕ್ಷವಾಗಿ ಮೋದಿ ಹೇಳಿದರು.
‘ತಮ್ಮ ಅಡಗುತಾಣಗಳ ಮೇಲೆ ಭಾರತೀಯ ಪಡೆಗಳು ದಾಳಿ ನಡೆಸಿದವು. ತಮ್ಮ ನಾಯಕ ಮಸೂದ್ ಅಜರ್ ಕುಟುಂಬ ಈ ದಾಳಿಯಲ್ಲಿ ನಾಶವಾಯಿತು’ ಎಂಬುದಾಗಿ ಜೆಇಎಂ ಕಮಾಂಡರ್ ಹೇಳುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
‘ಇದು ಹೊಸ ಭಾರತ; ಯಾವುದೇ ಅಣ್ವಸ್ತ್ರದ ಬೆದರಿಕೆ ಹೆದರುವುದಿಲ್ಲ. ಶತ್ರುವಿನ ಮನೆಗೆ ನುಗ್ಗಿ ನಮ್ಮ ಪಡೆಗಳು ಹೊಡೆದಿವೆ’ ಎಂದರು.
‘ಪಾಕಿಸ್ತಾನದಿಂದ ಬಂದಿದ್ದ ಉಗ್ರರು ನಮ್ಮ ಸಹೋದರಿಯರು ಹಾಗೂ ತಾಯಂದಿರ ಕುಂಕುಮ ಅಳಿಸಿದ್ದರು. ಇದಕ್ಕೆ ತಕ್ಕ ಉತ್ತರ ನೀಡುಲು ನಾವು ಆಪರೇಷನ್ ಸಿಂಧೂರ ನಡೆಸಿ, ಉಗ್ರರ ನೆಲೆಗಳನ್ನು ಧ್ವಂಸ ಮಾಡಿದೆವು’ ಎಂದು ಹೇಳಿದರು.
ಮುಂಬರುವ ಹಬ್ಬಗಳ ಸಂದರ್ಭದಲ್ಲಿ ಸ್ವದೇಶಿ ಉತ್ಪನ್ನಗಳನ್ನೇ ಬಳಸುವಂತೆ ಮನವಿ ಮಾಡಿದ ಅವರು, ‘ನೀವು ಖರೀದಿಸುವ ಉತ್ಪನ್ನ ಭಾರತದಲ್ಲಿ ತಯಾರಾಗಿದೆಯೇ ಎಂಬುದನ್ನು ಪರಿಶೀಲಿಸುವುದು ಮುಖ್ಯ’ ಎಂದರು.
ಸ್ವದೇಶಿ ವಸ್ತುಗಳ ಖರೀದಿಯಿಂದ ದೇಶದೊಳಗೇ ಹಣದ ಚಲಾವಣೆ ಆಗಲಿದ್ದು ಅಭಿವೃದ್ಧಿಗೆ ನೇರವಾಗಿ ಕೊಡುಗೆ ನೀಡಿದಂತಾಗಲಿದೆನರೇಂದ್ರ ಮೋದಿ ಪ್ರಧಾನಿ
‘ಸ್ವದೇಶಿ ವಸ್ತು ಖರೀದಿಸಿ‘
* ಜಿಎಸ್‌ಟಿ ದರ ಕಡಿತ ಸೆ.22ರಿಂದ ಜಾರಿಗೆ ಬರಲಿದೆ. ಎಲ್ಲರೂ ಸ್ವದೇಶಿ ವಸ್ತುಗಳನ್ನು ಖರೀದಿಸಬೇಕು ಹಾಗೂ ಪರಿಷ್ಕೃತ ದರಗಳ ಲಾಭ ಪಡೆಯಬೇಕು
* ಭಾರತದಲ್ಲಿ ತಯಾರಾದ ಸರಕುಗಳನ್ನು ಮಾರಾಟ ಮಾಡುವ ಅಂಗಡಿಗಳು ‘ಗರ್ವ್ ಸೆ ಕಹೊ ಯೇ ಸ್ವದೇಶಿ ಹೈ’ (ಈ ವಸ್ತುಗಳು ಸ್ವದೇಶಿ ಎಂಬುದನ್ನು ಹೆಮ್ಮೆಯಿಂದ ಹೇಳಿ) ಎಂಬ ಫಲಕಗಳನ್ನು ಅಳವಡಿಸಬೇಕು *
ಸ್ವದೇಶಿ ವಸ್ತುಗಳ ಖರೀದಿಯಿಂದ ಸರ್ಕಾರದ ಬೊಕ್ಕಸ ಸೇರುವ ಹಣವು ರಸ್ತೆಗಳು ಹಳ್ಳಿಗಳಲ್ಲಿ ಶಾಲೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣ ಸೇರಿ ಹಲವು ಕಲ್ಯಾಣ ಕಾರ್ಯಕ್ರಮಗಳಿಗೆ ನೆರವಾಗಲಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.