ಪಂಜಾಬ್‌ನ ಆದಮ್‌ಪುರ ವಾಯುನೆಲೆಗೆ ಭೇಟಿ ನೀಡಿದ ಪ್ರಧಾನಿ ಮೋದಿ
ಚಿತ್ರ ಕೃಪೆ: @narendramodi
ನವದೆಹಲಿ: ಆಪರೇಷನ್ ಸಿಂಧೂರ ಕಾರ್ಯಾಚರಣೆ ಕುರಿತು ದೇಶವನ್ನು ಉದ್ದೇಶಿಸಿ ಮಾತನಾಡಿದ ಒಂದು ದಿನದ ನಂತರ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರು ಪಂಜಾಬ್‌ನಲ್ಲಿನ ಆದಮ್‌ಪುರ ವಾಯುನೆಲೆಗೆ ಭೇಟಿ ನೀಡಿ ಯೋಧರೊಂದಿಗೆ ಮಾತುಕತೆ ನಡೆಸಿದರು.
ಈ ವೇಳೆ ಯೋಧರು ಸದ್ಯದ ಸ್ಥಿತಿಯ ಬಗ್ಗೆ ವಿವರಿಸಿದರು.
ಭೇಟಿಯ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಯೋಧರೊಂದಿಗಿನ ಫೋಟೊಗಳನ್ನು ಮೋದಿ ಹಂಚಿಕೊಂಡಿದ್ದಾರೆ.
‘ಇಂದು ಬೆಳಿಗ್ಗೆ, ನಾನು ಆದಮ್‌ಪುರಕ್ಕೆ ಹೋಗಿ ನಮ್ಮ ವೀರ ಯೋಧರನ್ನು ಭೇಟಿಯಾದೆ. ಧೈರ್ಯ, ದೃಢನಿಶ್ಚಯ ಮತ್ತು ನಿರ್ಭಯತೆಯನ್ನು ಸಾರುವವರೊಂದಿಗೆ ಇರುವುದು ಬಹಳ ವಿಶೇಷ ಅನುಭವವಾಗಿತ್ತು. ನಮ್ಮ ಸಶಸ್ತ್ರ ಪಡೆಗಳು ಭಾರತಕ್ಕಾಗಿ ಮಾಡುವ ಪ್ರತಿ ಕೆಲಸಕ್ಕೂ ಇಡೀ ದೇಶ ಕೃತಜ್ಞವಾಗಿರುತ್ತದೆ’ ಎಂದು ಮೋದಿ ಬರೆದುಕೊಂಡಿದ್ದಾರೆ.
ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಮೇ 7–8ರ ರಾತ್ರಿ ಆವಂತಿಪುರ, ಶ್ರೀನಗರ, ಜಮ್ಮು, ಪಠಾಣಕೋಟ್, ಅಮೃತಸರ, ಕಪೂರ್ತಲಾ, ಜಲಂಧರ, ಲುಧಿಯಾನ, ಆದಮ್‌ಪುರ, ಬಠಿಂಡಾ, ಚಂಡೀಗಢ, ನಾಲ್, ಫಲೋಡಿ, ಭುಜ್ ಮತ್ತಿತರ ಕಡೆಗಳಲ್ಲಿನ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ಪಾಕಿಸ್ತಾನ ಡ್ರೋನ್ ಮತ್ತು ಕ್ಷಿಪಣಿಗಳಿಂದ ದಾಳಿ ನಡೆಸಿತ್ತು. ನಿರ್ದಿಷ್ಟ ಹಾಗೂ ಕ್ಷಿಪ್ರ ಪ್ರತ್ಯುತ್ತರ ನೀಡುವ ಮೂಲಕ, ಪಾಕಿಸ್ತಾನದ ಈ ಎಲ್ಲ ಪ್ರಯತ್ನಗಳನ್ನು ಭಾರತ ಸೇನೆ ವಿಫಲಗೊಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.