ರಕ್ಷಣಾ ಸಚಿವ ರಾಜನಾಥ್ ಸಿಂಗ್
ಕೃಪೆ: ಪಿಟಿಐ
ನವದೆಹಲಿ: ಭಾರತೀಯ ಸೇನೆಯು 'ಆಪರೇಷನ್ ಸಿಂಧೂರ'ದ ಎಲ್ಲ ಉದ್ದೇಶಗಳನ್ನು ಯಶಸ್ವಿಯಾಗಿ ಸಫಲಗೊಳಿಸಿದೆ. ಪರಿಸ್ಥಿತಿಯನ್ನು ಉಲ್ಬಣಗೊಳಿಸಿ, ಪಾಕಿಸ್ತಾನದೊಂದಿಗೆ ಯುದ್ಧ ಆರಂಭಿಸುವುದು ಕಾರ್ಯಾಚರಣೆಯ ಉದ್ದೇಶವಾಗಿರಲಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ತಿಳಿಸಿದ್ದಾರೆ.
ಪಹಲ್ಗಾಮ್ ದಾಳಿ ಬಳಿಕ ಪಾಕ್ ಜೊತೆ ಏರ್ಪಟ್ಟಿದ್ದ ಸಂಘರ್ಷದ ಕುರಿತು ಐದು ತಿಂಗಳ ಬಳಿಕ ಸಿಂಗ್ ಮಾತನಾಡಿದ್ದಾರೆ.
ದಸರಾ ಪ್ರಯುಕ್ತ ಗುಜರಾತಿನ ಭುಜ್‌ನಲ್ಲಿ 'ಶಸ್ತ್ರ ಪೂಜೆ'ಯಲ್ಲಿ ಪಾಲ್ಗೊಂಡ ಅವರು, ಸೈನಿಕರನ್ನುದ್ದೇಶಿಸಿ 'ಗಡಿಯಾಚಿನ ಭಯೋತ್ಪಾದನೆ ವಿರುದ್ಧದ ಹೋರಾಟ ಮುಂದುವರಿಯಲಿದೆ' ಎಂದು ಹೇಳಿದ್ದಾರೆ.
'ಪಾಕಿಸ್ತಾನ ಸೇನೆ, ಆಪರೇಷನ್ ಸಿಂಧೂರ ಸಮಯದಲ್ಲಿ ಭಾರತೀಯ ರಕ್ಷಣಾ ವ್ಯವಸ್ಥೆಯನ್ನು ಭೇದಿಸಲು ಯತ್ನಿಸಿ ವಿಫಲವಾಯಿತು' ಎಂದಿರುವ ಸಚಿವ, 'ಪ್ರತೀಕಾರದ ವೇಳೆ ಭಾರತೀಯ ಪಡೆಗಳು, ಪಾಕ್‌ನ ವಾಯು ರಕ್ಷಣಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಭೇದಿಸಿದವು. ಅದರೊಂದಿಗೆ, ಯಾವುದೇ ಸಮಯದಲ್ಲಿ ಪಾಕಿಸ್ತಾನಕ್ಕೆ ಭಾರಿ ನಷ್ಟ ಮಾಡಬಲ್ಲೆವು ಎಂಬ ಸಂದೇಶವನ್ನು ವಿಶ್ವಕ್ಕೆ ಸಾರಿದವು' ಎಂದು ಪ್ರತಿಪಾದಿಸಿದ್ದಾರೆ.
ಸೇನಾ ಕ್ರಮವು ಭಯೋತ್ಪಾದನೆ ವಿರುದ್ಧದ ಹೋರಾಟವಾಗಿರುವುದರಿಂದ ಭಾರತವು ಸಂಯಯ ಪ್ರದರ್ಶಿಸಿದೆ ಎಂದೂ ಹೇಳಿಕೊಂಡಿದ್ದಾರೆ.
'ಉದ್ವಿಗ್ನತೆಯನ್ನು ತೀವ್ರಗೊಳಿಸುವುದು ಮತ್ತು ಯುದ್ಧ ಆರಂಭಿಸುವುದು ಆಪರೇಷನ್ ಸಿಂಧೂರದ ಉದ್ದೇಶವಾಗಿರಲಿಲ್ಲ. ಭಾರತೀಯ ಪಡೆಗಳು ಕಾರ್ಯಾಚರಣೆಯ ಎಲ್ಲ ಉದ್ದೇಶಗಳನ್ನು ಯಶಸ್ವಿಯಾಗಿ ಸಾಧಿಸಿವೆ. ಆ ಬಗ್ಗೆ ಸಂತಸವಿದೆ. ಆದರೆ, ಭಯೋತ್ಪಾದನೆ ವಿರುದ್ಧದ ಹೋರಾಟ ಮುಂದುವರೆದಿದೆ' ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ಏಪ್ರಿಲ್ 22ರಂದು ಗುಂಡಿನ ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಪಡೆಗಳು ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಮೇ 7ರಂದು 'ಆಪರೇಷನ್ ಸಿಂಧೂರ' ಆರಂಭಿಸಿತ್ತು. ಇದರ ಬೆನ್ನಲ್ಲೇ, ಪಾಕಿಸ್ತಾನ ಸೇನೆ ಭಾರತದ ಮೇಲೆ ದಾಳಿ ಮಾಡಿತ್ತು. ಇದರಿಂದ ಉಭಯ ರಾಷ್ಟ್ರಗಳ ನಡುವೆ ಸಂಘರ್ಷ ತೀವ್ರಗೊಂಡಿತ್ತು. ಪಾಕ್ ದಾಳಿಯನ್ನು ಭಾರತೀಯ ಸೇನೆ ಯಶಸ್ವಿಯಾಗಿ ಹಿಮ್ಮೆಟ್ಟಿಸಿತ್ತು.
ಮೇ 10ರಂದು ಕದನ ವಿರಾಮ ಘೋಷಣೆಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.