ಪ್ರಧಾನಿ ನರೇಂದ್ರ ಮೋದಿ
(ಸಂಗ್ರಹ ಚಿತ್ರ)
ನವದೆಹಲಿ: ಭಯೋತ್ಪಾದನೆ ವಿರುದ್ಧದ ಭಾರತದ ಕಠಿಣ ನಿಲುವನ್ನು ‘ಆಪರೇಷನ್ ಸಿಂಧೂರ’ ಜಗತ್ತಿಗೆ ಸ್ಪಷ್ಟಪಡಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪದಿಸಿದ್ದಾರೆ. ಅಲ್ಲದೆ ರಾಷ್ಟ್ರದ ಹಿತಾಸಕ್ತಿಗಾಗಿ ತಮ್ಮ ಸರ್ಕಾರ ಸೂಕ್ತವಾದ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಮಂಗಳವಾರ ಅವರು ಹೇಳಿದ್ದಾರೆ.
ಆಧ್ಯಾತ್ಮಿಕ ಗುರು, ಸಾಮಾಜ ಸುಧಾರಕ ನಾರಾಯಣ ಗುರು ಮತ್ತು ಮಹಾತ್ಮ ಗಾಂಧಿಯವರ ನಡುವಿನ ಸಂಭಾಷಣೆಯ ಶತಮಾನೋತ್ಸವದ ಆಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ.
ಸಂಘರ್ಷದ ವೇಳೆ ಭಾರತದಲ್ಲಿ ತಯಾರಾದ ಶಸ್ತ್ರಾಸ್ತ್ರಗಳು ತಮ್ಮ ಪ್ರಭಾವವನ್ನು ತೋರಿಸಿದವು ಎಂದು ಪಾಕಿಸ್ತಾನದ ಹೆಸರನ್ನು ಉಲ್ಲೇಖಿಸಿದೇ ಅವರು ಹೇಳಿದ್ದಾರೆ.
‘ಭಾರತೀಯರ ರಕ್ತವನ್ನು ಚೆಲ್ಲುವ ಭಯೋತ್ಪಾದಕರಿಗೆ ಯಾವುದೇ ಅಡಗುತಾಣವು ಸುರಕ್ಷಿತವಲ್ಲ ಎಂದು ನಾವು ತೋರಿಸಿದ್ದೇವೆ. ಯಾವುದೇ ತಾರತಮ್ಯವಿಲ್ಲದ ಬಲಿಷ್ಠ ಭಾರತವನ್ನು ಬಯಸಿದ ಪೂಜ್ಯ ಆಧ್ಯಾತ್ಮಿಕ ವ್ಯಕ್ತಿಯ ಆದರ್ಶಗಳ ಮೇಲೆ ನಮ್ಮ ಸರ್ಕಾರ ಕೆಲಸ ಮಾಡಿದೆ’ ಎಂದರು.
ಕಳೆದ 11 ವರ್ಷಗಳಲ್ಲಿ ನಮ್ಮ ಸರ್ಕಾರವು ಸಾಮಾಜಿಕ, ಆರ್ಥಿಕ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಭಾರತವನ್ನು ಬಲಿಷ್ಠಗೊಳಿಸಲು ಕೆಲಸ ಮಾಡಿದೆ. ಭಾರತವು ತನ್ನ ರಕ್ಷಣಾ ಅಗತ್ಯಗಳನ್ನು ಪೂರೈಸಲು ವಿದೇಶಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತಿದೆ ಮತ್ತು ರಕ್ಷಣಾ ವಲಯದಲ್ಲಿ ಭಾರತ ಆತ್ಮನಿರ್ಭರವಾಗುತ್ತಿದೆ’ ಎಂದು ಹೇಳಿದ್ದಾರೆ.
ಪಹಲ್ಗಾಮ್‌ನಲ್ಲಿ ನಾಗರಿಕರ ಮೇಲೆ ಭಯೋತ್ಪಾದಕರು ಭೀಕರ ದಾಳಿ ನಡೆಸಿದ ಬಳಿಕ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ತಾಣಗಳ ಮೇಲೆ ಭಾರತೀಯ ಸೇನೆಯು 22 ನಿಮಿಷಗಳಲ್ಲಿ ದೇಶದಲ್ಲಿ ತಯಾರಿಸಿದ ಶಸ್ತ್ರಾಸ್ತ್ರಗಳೊಂದಿಗೆ ಶತ್ರುಗಳನ್ನು ಮಂಡಿಯೂರಿಸಿತು ಎಂದು ತಿಳಿಸಿದ್ದಾರೆ.
ಭಾರತದಲ್ಲಿ ತಯಾರಿಸಿದ ಶಸ್ತ್ರಾಸ್ತ್ರಗಳನ್ನು ಭವಿಷ್ಯದಲ್ಲಿ ಪ್ರಪಂಚದಾದ್ಯಂತ ವಿತರಿಸಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.